ಬೈಂದೂರು: ಭೀಕರ ರಸ್ತೆ ಅಪಘಾತ: ಬೆಂಗಳೂರು ಮೂಲದ ತಾಯಿ, ಮಗಳು ಮೃತ್ಯು
ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರ ನಾವುಂದ ಸಮೀಪ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ. ಪ್ರವಾಸಕ್ಕೆಂದು ಬಂದಿದ್ದ ಕುಟುಂಬದ ಕಾರು, ರಸ್ತೆ ಬದಿ ನಿಂತಿದ್ದ ಕಂಟೇನರ್ ಟ್ರಕ್‌ಗೆ ವೇಗವಾಗಿ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣವಾಗಿದೆ.
ಮೃತರನ್ನು ಬೆಂಗಳೂರಿನ ಮಮತಾ (36) ಮತ್ತು ಅವರ ಪುತ್ರಿ ಧೃತಿಕಾ (14) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಾಯಿ-ಮಗಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಿಂದ ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ವೀಕ್ಷಣೆಗೆ ಬಂದಿದ್ದ ಈ ಕುಟುಂಬವು, ಉಡುಪಿ ಪ್ರವಾಸ ಮುಗಿಸಿ ಮುರುಡೇಶ್ವರ ಮತ್ತು ಗೋಕರ್ಣದತ್ತ ಪ್ರಯಾಣಿಸುತ್ತಿತ್ತು. ನಾವುಂದದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಎರ್ಟಿಗಾ ಕಾರು, ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ರಘು (40), ಜಾಹ್ನವಿ (12), ಚಾರ್ವಿ (10) ಮತ್ತು ಕಿರಣ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ರಘು ಮತ್ತು ಇಬ್ಬರು ಮಕ್ಕಳನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಿರಣ್ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಧಾವಿಸಿ ಬಂದ ಸ್ಥಳೀಯ ನಿವಾಸಿಗಳು ಮತ್ತು ದಾರಿಹೋಕರು, ಕಾರಿನೊಳಗೆ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆಯಲು ನೆರವಾದರು.




