ಉಳ್ಳಾಲ: ದಾರಾಕಾರ ಮಳೆಗೆ ಆವರಣ ಗೋಡೆ ಕುಸಿದು ಮನೆ ಸಂಪೂರ್ಣ ಧ್ವಂಸ
ಮಂಗಳೂರು: ಕಳೆದ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಎಸ್ಟೇಟ್ ಒಂದರ ಭಾರೀ ಎತ್ತರದ ಆವರಣ ಗೋಡೆ ಕುಸಿದು ಬಿದ್ದು, ಪಕ್ಕದ ಒಂಟಿ ಮನೆಯು ಸಂಪೂರ್ಣ ನೆಲಸಮಗೊಂಡ ಘಟನೆ ತೊಕ್ಕೊಟ್ಟು ಸಮೀಪದ ಕೆರೆಬೈಲ್‌ನಲ್ಲಿನಡೆದಿದೆ.
ಕೆರೆಬೈಲ್ ಗುಡ್ಡೆಯ ನಿವಾಸಿ ಕಿಶೋರ್ ಅವರ ಮನೆ ಸಂಪೂರ್ಣ ನೆಲಸಮಗೊಂಡಿದೆ. ಅಪಾಯವನ್ನು ನಿರೀಕ್ಷಿಸಿದ್ದ ಕುಟುಂಬದ ಐವರು ಸದಸ್ಯರು ಎರಡು ವಾರಗಳ ಹಿಂದಷ್ಟೇ ಮನೆಯಿಂದ ಸ್ಥಳಾಂತರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಘೋರ ಅನಾಹುತವೊಂದು ತಪ್ಪಿದಂತಾಗಿದೆ ಎಂದು ತಿಳಿದು ಬಂದಿದೆ.
ಕೆರೆಬೈಲ್‌ನ ಗುಡ್ಡ ಪ್ರದೇಶದ ತುದಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಬೃಹತ್ ವಿಸ್ತೀರ್ಣವುಳ್ಳ ಐಷಾರಾಮಿ ಎಸ್ಟೇಟ್ ಸುತ್ತಲೂ ಎತ್ತರದ ಆವರಣ ಗೋಡೆಯನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷ ಸುರಿದ ಭಾರೀ ಮಳೆಗೆ ಎಸ್ಟೇಟ್‌ನ ಆವರಣ ಗೋಡೆ ಕುಸಿದು ನೆರೆಯ ಕಿಶೋರ್ ಅವರ ಮನೆಯ ಕಡೆಗೆ ವಾಲಿ ನಿಂತಿತ್ತು. ಈ ಬಗ್ಗೆ ಕಿಶೋರ್ ಅವರು ಸ್ಥಳೀಯ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಮುಂಜಾಗೃತಾ ಕ್ರಮವಾಗಿ ನಗರಸಭೆ ಅಧಿಕಾರಿಗಳು ಕಿಶೋರ್ ಅವರ ಕುಟುಂಬ ಸೇರಿದಂತೆ ಎಸ್ಟೇಟ್ ಆವರಣ ಗೋಡೆ ಕುಸಿತದ ಭೀತಿಯಲ್ಲಿದ್ದ ನೆರೆಯ ಹತ್ತು ಮನೆಗಳ ಕುಟುಂಬಗಳನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು.
ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಎಸ್ಟೇಟ್‌ನ ಆವರಣ ಗೋಡೆ ಕುಸಿದು ಕಿಶೋರ್ ಅವರ ಮನೆಯು ಸಂಪೂರ್ಣವಾಗಿ ನೆಲಸಮಗೊಂಡಿದ್ದು, ಘಟನೆಗೆ ಉಳ್ಳಾಲ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಶಾಂತ್, ನಗರಸಭೆ ಪೌರಾಯುಕ್ತ ಸಂತೋಷ್, ಕಂದಾಯ ನಿರೀಕ್ಷಕ ಪ್ರಮೋದ್ ಹಾಗೂ ಗ್ರಾಮ ಕರಣಿಕ ಅಮ್ಜದ್ ಖಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




