August 18, 2026

ಆಹಾರ, ಔಷಧ ಕಳಪೆ ಗುಣಮಟ್ಟಕ್ಕೆ ಬ್ರೇಕ್: ಹೋಟೆಲ್, ಮೆಡಿಕಲ್ ಶಾಪ್‌ಗಳಲ್ಲಿ ದೂರು ನೀಡಲು ‘QR’ ಕೋಡ್ ವ್ಯವಸ್ಥೆ ಜಾರಿ

0
IMG-20260818-WA0039

ಬೆಂಗಳೂರು: ರಾಜಧಾನಿಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳು, ಪಬ್‌ಗಳು ಹಾಗೂ ವಿಶ್ವವಿದ್ಯಾಲಯಗಳ ಕ್ಯಾಂಟೀನ್‌ಗಳಲ್ಲಿ ಸಿಗುವ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರು ಇನ್ಮುಂದೆ ನೇರವಾಗಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಪ್ರತಿಯೊಂದು ಆಹಾರ ಮಳಿಗೆಗಳು ಹಾಗೂ ಕ್ಯಾಂಟೀನ್‌ಗಳಲ್ಲಿ ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ಪರಿಚಯಿಸಿದೆ.

ಸ್ವಚ್ಛತೆ ಕೊರತೆ ಅಥವಾ ಕಳಪೆ ಗುಣಮಟ್ಟದ ಆಹಾರ ಸರಬರಾಜಾಗುತ್ತಿದ್ದರೆ, ಗ್ರಾಹಕರು ಸ್ಥಳದಲ್ಲೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಮ್ಮ ದೂರುಗಳನ್ನು ಆನ್‌ಲೈನ್ ಮೂಲಕ ಸುಲಭವಾಗಿ ದಾಖಲಿಸಬಹುದಾಗಿದೆ.

ಆಹಾರ ಮಳಿಗೆಗಳು ಮಾತ್ರವಲ್ಲದೆ, ಇನ್ಮುಂದೆ ಮೆಡಿಕಲ್ ಶಾಪ್‌ಗಳಲ್ಲೂ ಸಹ ಕ್ಯೂಆರ್ ಕೋಡ್‌ಗಳನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. ಔಷಧ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಎದುರಾಗುವ ನಾನಾ ರೀತಿಯ ಶೋಷಣೆ ಹಾಗೂ ಸಮಸ್ಯೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದು, ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಗಳ ಮಾರಾಟ, ತಪ್ಪು ಡೋಸೇಜ್ ನೀಡುವುದು, ಅವಧಿ ಮೀರಿದ (Expiry Date) ಔಷಧಿಗಳನ್ನು ನೀಡುವುದು ಹಾಗೂ ಬಿಲ್ ನೀಡದೆ ಇರುವುದು ಕಂಡುಬಂದರೆ ಗ್ರಾಹಕರು ನೇರವಾಗಿ ದೂರು ಸಲ್ಲಿಸಬಹುದಾಗಿದೆ.

ನೂತನ ಕ್ಯೂಆರ್ ಕೋಡ್ ವ್ಯವಸ್ಥೆಯು ಕರ್ನಾಟಕ ಸರ್ಕಾರದ ‘iPGRS’ (ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ) ಆನ್‌ಲೈನ್ ಪೋರ್ಟಲ್‌ಗೆ ಸಂಪರ್ಕಗೊಂಡಿದೆ. ವೆಬ್‌ಸೈಟ್ ಮೂಲಕ ಅಥವಾ ‘ಜನಸ್ಪಂದನ 1902’ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಲು ಅವಕಾಶವಿದೆ. ಆನ್‌ಲೈನ್‌ ನಲ್ಲಿ ದೂರು ಸಲ್ಲಿಸುವಾಗ ‘FOOD AND SAFETY’ (ಆಹಾರ ಮತ್ತು ಸುರಕ್ಷತೆ) ವಿಭಾಗವನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ವಿವರಗಳನ್ನು ದಾಖಲಿಸಬೇಕಾಗುತ್ತದೆ. ಮುಖ್ಯವಾಗಿ ದೂರು ನೀಡಲು ಆಧಾರ್ ಅಥವಾ ಪಡಿತರ ಚೀಟಿ ಕಡ್ಡಾಯವಲ್ಲ, ಆದರೆ ದೂರುದಾರರ ಆಧಾರ್ ವಿವರ ಬಳಸುವುದಕ್ಕೆ ಅವರ ಪೂರ್ವ ಒಪ್ಪಿಗೆ ಅಗತ್ಯವಾಗಿರುತ್ತದೆ.

ಸಾರ್ವಜನಿಕರಿಂದ ಬರುವ ಪ್ರತಿಯೊಂದು ದೂರನ್ನು ಅತ್ಯಂತ ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರವು ‘ವಾಚ್ ಕಮಿಟಿ’ (Watch Committee) ಒಂದನ್ನು ರಚಿಸಿದೆ. ನಿವೃತ್ತ ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡ ಈ ವಿಶೇಷ ಸಮಿತಿಯು ದೂರುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ತಕ್ಷಣದ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಿದೆ. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮದಿಂದ ಸಾರ್ವಜನಿಕರಿಗೆ ನೀಡಲಾಗುವ ಆಹಾರ ಹಾಗೂ ಔಷಧ ಸೇವೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಹೆಚ್ಚಾಗಲಿದೆ.

ಸರ್ಕಾರದ ಈ ವಿನೂತನ iPGRS ಆನ್‌ಲೈನ್ ಹಾಗೂ ಕ್ಯೂಆರ್ ಕೋಡ್ ದೂರು ವ್ಯವಸ್ಥೆಗೆ ಸಾರ್ವಜನಿಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಯೋಜನೆಗೆ ಚಾಲನೆ ಸಿಕ್ಕ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 504 ದೂರುಗಳು ಆನ್‌ಲೈನ್‌ನಲ್ಲಿ ದಾಖಲಾಗಿವೆ. ಆಹಾರ ಸುರಕ್ಷತೆ, ಆರೋಗ್ಯ ಕ್ಷೇತ್ರ ಮಾತ್ರವಲ್ಲದೆ ವಿವಿಧ ಇಲಾಖೆಗಳ ಸೇವೆ ಮತ್ತು ಯೋಜನೆಗಳ ಕುರಿತಾಗಿಯೂ ಸಾರ್ವಜನಿಕರು ಉತ್ಸಾಹದಿಂದ ದೂರು ಹಾಗೂ ಸಲಹೆಗಳನ್ನು ಸಲ್ಲಿಸುತ್ತಿದ್ದು, ಆಹಾರ ಸುರಕ್ಷತೆ ಇಲಾಖೆಯ ಈ ಅಭಿಯಾನಕ್ಕೆ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!