ಆಕಾಶದಲ್ಲಿ ದಿಢೀರ್ 300 ಅಡಿ ಕುಸಿತ ಕಂಡ ಏರ್ ಇಂಡಿಯಾ ವಿಮಾನ ಪ್ರಕರಣ: ಪೈಲಟ್ ‘ಡ್ರಗ್ಸ್’ ಪರೀಕ್ಷೆ ಪಾಸಿಟಿವ್
ನವದೆಹಲಿ: ಫುಕೆಟ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಆಗಸ್ಟ್ 4 ರಂದು ಗಗನದಲ್ಲೇ ದಿಢೀರನೆ 300 ಅಡಿಗಳಷ್ಟು ಕೆಳಗೆ ಕುಸಿದು 17 ಪ್ರಯಾಣಿಕರು ಹಾಗೂ ಸಿಬ್ಬಂದಿ ಗಾಯಗೊಂಡಿದ್ದ ಭೀಕರ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ವಿಮಾನದ ಮುಖ್ಯ ಪೈಲಟ್ (ಪೈಲಟ್ ಇನ್ ಕಮಾಂಡ್) ಅವರ ದೃಢೀಕರಣ ಮಾದಕದ್ರವ್ಯ ಪರೀಕ್ಷೆಯು ‘ಗಾಂಜಾ’ ಸೇವಿಸಿರುವುದನ್ನು ಖಚಿತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಆರಂಭಿಕ ತಪಾಸಣೆಯಲ್ಲಿಯೂ ಪೈಲಟ್ ದೇಹದಲ್ಲಿ ನಿಷೇಧಿತ ವಸ್ತುವಿನ ಅಂಶ ಪತ್ತೆಯಾಗಿತ್ತು.
ಇದೇ ವಿಚಾರವಾಗಿ ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ಟಾಟಾ ಸನ್ಸ್ ಸಲಹೆಗಾರ ಪ್ರದೀಪ್ ಸಿಂಗ್ ಖರೋಲಾ ಹಾಗೂ ಏರ್ ಇಂಡಿಯಾ ಸುರಕ್ಷತಾ ಮುಖ್ಯಸ್ಥ ದೀಪಕ್ ಜೋಶಿ ಅವರು ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ತನಿಖೆಯ ಸ್ಥಿತಿಗತಿಗಳ ಕುರಿತು ಚರ್ಚಿಸಿದ್ದಾರೆ.
ಒಡಿಶಾದ ಮೇಲ್ಭಾಗದಲ್ಲಿ ಸುಮಾರು 36,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಸಂಭವಿಸಿದ ಈ ಘಟನೆಯನ್ನು ‘ಗಂಭೀರ ಅಪಘಾತ’ ಎಂದು ವರ್ಗೀಕರಿಸಲಾಗಿದ್ದು, ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಇದರ ಪೂರ್ಣ ಪ್ರಮಾಣದ ತನಿಖೆ ನಡೆಸುತ್ತಿದೆ. ತನಿಖೆಗೆ ಏರ್‌ಬಸ್ ಸಂಸ್ಥೆ ಹಾಗೂ ಫ್ರೆಂಚ್ ವಿಮಾನಯಾನ ತನಿಖಾ ಸಂಸ್ಥೆ ಬಿಇಎ (BEA) ಕೂಡ ನೆರವು ನೀಡಲಿವೆ.
ಮೊದಲಿಗೆ ಈ ದುರಂತಕ್ಕೆ ತೀವ್ರ ಹವಾಮಾನ ವೈಪರೀತ್ಯ ಅಥವಾ ಟರ್ಬುಲೆನ್ಸ್ ಕಾರಣ ಎಂದು ಹೇಳಲಾಗಿತ್ತಾದರೂ, ವಿಮಾನದ ಹೈಡ್ರಾಲಿಕ್ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಎದುರಾಗಿದ್ದವು ಎಂದು ಮೂಲಗಳು ಹೇಳಿವೆ. ಕಾಕ್‌ಪಿಟ್‌ನಲ್ಲಿ ಸಾಲು ಸಾಲು ಎಚ್ಚರಿಕೆಯ ಸಂದೇಶಗಳು ಬಂದಾಗ ಪೈಲಟ್‌ಗಳು ವಿಮಾನವನ್ನು ಮ್ಯಾನುಯಲ್ ಕಂಟ್ರೋಲ್‌ಗೆ ತೆಗೆದುಕೊಂಡಾಗ ಈ ಎತ್ತರ ಕುಸಿತ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಏರ್‌ಬಸ್ ಎ320 ವಿಮಾನದಲ್ಲಿ ಒಂದೇ ಬಾರಿಗೆ ಹಲವು ಹೈಡ್ರಾಲಿಕ್ ದೋಷಗಳು ಎದುರಾಗುವುದು ಅತ್ಯಂತ ಅಪರೂಪದ ಸಂಗತಿಯಾಗಿದೆ.
ಒಟ್ಟು 137 ಪ್ರಯಾಣಿಕರು ಮತ್ತು 8 ಮಂದಿ ಸಿಬ್ಬಂದಿಯಿದ್ದ ಈ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ನಂತರ, ಗಾಯಗೊಂಡಿದ್ದ 13 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ವಿಮಾನದ ಬ್ಲ್ಯಾಕ್ ಬಾಕ್ಸ್ ಹಾಗೂ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಮಾನದ ತಾಂತ್ರಿಕ ದೋಷದ ಜೊತೆಗೆ ಪೈಲಟ್ ಗಾಂಜಾ ಸೇವಿಸಿ ವಿಮಾನ ಚಲಾಯಿಸಿರುವ ಗಂಭೀರ ಕೋನದಲ್ಲೂ ತನಿಖೆ ಚುರುಕುಗೊಂಡಿದೆ.




