September 24, 2026

ಚಲಿಸುತ್ತಿದ್ದ ಸ್ಲೀಪರ್ ಬಸ್‌ಗೆ ಬೆಂಕಿ: 9 ಪ್ರಯಾಣಿಕರು ಸಜೀವ ದಹನ

0
image_editor_output_image1649763023-1790224801626

ಗ್ರೇಟರ್ ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ತಡರಾತ್ರಿ ಭೀಕರ ದುರಂತ ಸಂಭವಿಸಿದೆ. ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಟೂರಿಸ್ಟ್ ಬಸ್ ಒಂದಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆ ಸೇರಿದಂತೆ ಕನಿಷ್ಠ 9 ಪ್ರಯಾಣಿಕರು ಸಜೀವ ದಹನಗೊಂಡಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ವೇಳೆ ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಕರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಈ ದುರಂತವು ಬಸ್ಸಿನ ಹವಾನಿಯಂತ್ರಣ (AC) ವ್ಯವಸ್ಥೆಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಹಾಗೂ ಸ್ಫೋಟದಿಂದ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ.
ಬಸ್ ನೋಯ್ಡಾದಿಂದ ಉತ್ತರ ಪ್ರದೇಶದ ಮಹೋಬಾಗೆ ಯಮುನಾ ಎಕ್ಸ್‌ಪ್ರೆಸ್‌ವೇ ಮಾರ್ಗವಾಗಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮಧ್ಯರಾತ್ರಿಯ ಸಮಯವಾಗಿದ್ದರಿಂದ ಹೆಚ್ಚಿನ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು.

ಬಸ್ಸಿನೊಳಗೆ ದಟ್ಟ ಹೊಗೆ ಆವರಿಸುತ್ತಿದ್ದಂತೆಯೇ ಎಚ್ಚರಗೊಂಡ ಪ್ರಯಾಣಿಕರಲ್ಲಿ ತೀವ್ರ ಕಾಲ್ತುಳಿತ ಹಾಗೂ ನೂಕುನುಗ್ಗಲು ಉಂಟಾಯಿತು. ಹೊಗೆಯಿಂದಾಗಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದ್ದರಿಂದ, ಅನೇಕ ಪ್ರಯಾಣಿಕರು ಬಸ್ಸಿನ ಗಾಜುಗಳನ್ನು ಒಡೆದು ಕಿಟಕಿಗಳ ಮೂಲಕ ಹೊರಗೆ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಎಕ್ಸ್‌ಪ್ರೆಸ್‌ವೇಯ ಬದಿಯಲ್ಲಿ ಬಸ್ ಸಂಪೂರ್ಣವಾಗಿ ಧಗಧಗಿಸಿ ಉರಿಯುತ್ತಿರುವ ದೃಶ್ಯ ಕಂಡುಬಂದಿತ್ತು.

ಮಾಹಿತಿ ಸಿಕ್ಕ ತಕ್ಷಣವೇ ಜೇವರ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಸುದೀರ್ಘ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದವು.

 

Leave a Reply

Your email address will not be published. Required fields are marked *

error: Content is protected !!