ಕಾಸರಗೋಡು: ಹೊಳೆಯಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು
ಕಾಸರಗೋಡು: ಕಾಸರಗೋಡಿನ ಮಾನ್ಯ ಮುಟ್ಟತ್ತೋಡಿಯ ಮಧುವಾಹಿನಿ ಹೊಳೆಯಲ್ಲಿ ಎಂಟು ವರ್ಷದ ಬಾಲಕನೊಬ್ಬ ಮುಳುಗಿ ಸಾವನ್ನಪ್ಪಿದ್ದ ಘಟನೆ ಸಂಭವಿಸಿದೆ.
ಮೃತರನ್ನು ಮುತ್ತತ್ತೋಡಿ ಕಲ್ಲಕಟ್ ಕೋಪ ಕಡಂಬಟ್ಟಿ ಮನೆಯ ಕೆ.ಅಬ್ದುಲ್ ರಹ್ಮಾನ್ ಮತ್ತು ಆಯಿಷತ್ ಶಿಬಿನಾ ದಂಪತಿಯ ಪುತ್ರ ಕೆ.ಎ ಅಬ್ದುಲ್ಲಾ ಎಂದು ಗುರುತಿಸಲಾಗಿದೆ.
ಅಬ್ದುಲ್ಲಾ ಮಾನ್ಯದಲ್ಲಿರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 2 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಘಟನೆ ನಡೆದಾಗ ಅಬ್ದುಲ್ಲಾ ತನ್ನ ತಂದೆ ಅಬ್ದುಲ್ ರೆಹಮಾನ್, ಸಹೋದರಿ ಖದೀಜತ್ ಶೈಮ ಮತ್ತು ತನ್ನ ತಂದೆಯ ಚಿಕ್ಕಮ್ಮನ ಮಗಳೊಂದಿಗೆ ಕೋಪಾ ಸೇತುವೆಯ ಬಳಿಯ ಮಧುವಾಹಿನಿ ನದಿಯ ಬಳಿ ಹೋಗಿದ್ದರು.
ನದಿಯ ದಡದಲ್ಲಿ ನಿಂತಿದ್ದ ಅಬ್ದುಲ್ಲಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ . ಕುಟುಂಬ ಸದಸ್ಯರು ತೀವ್ರ ಹುಡುಕಾಟ ನಡೆಸುತ್ತಿದ್ದಾಗ, ನೀರಿನಲ್ಲಿ ಮುಳುಗುತ್ತಿರುವುದು ಕಂಡು ಬಂದಿದೆ.
ತಕ್ಷಣ ಅವನನ್ನು ಹೊರತೆಗೆದು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಅವನನ್ನು ಚೆಂಗಳದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರು ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





