November 9, 2026

ಬಂಟ್ವಾಳ: ಅಕ್ರಮವಾಗಿ ಕೆಂಪು ಲ್ಯಾಟರೈಟ್ ಮಣ್ಣು ಸಾಗಾಟದ ಲಾರಿ ವಶಕ್ಕೆ

0
image_editor_output_image2059400442-1794201942675

ಬಂಟ್ವಾಳ: ಸಾರ್ವಜನಿಕ ರಸ್ತೆಯಲ್ಲಿ ದುರಸ್ತಿಗೀಡಾಗಿ ನಿಂತಿದ್ದ ಘನಲಾರಿಯೊಂದರಲ್ಲಿ ಯಾವುದೇ ಪರವಾನಿಗೆ ಅಥವಾ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಕೆಂಪು ಲ್ಯಾಟರೈಟ್ ಮಣ್ಣು ಸಾಗಾಟ ಮಾಡುತ್ತಿರುವುದು ವಿಟ್ಲ ಪೊಲೀಸರ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಬೈರಿಕಟ್ಟೆ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಘನಲಾರಿಯೊಂದು ಕೆಟ್ಟು ನಿಂತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಲಭಿಸಿತ್ತು.

ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, KA-21-C-4608 ನೋಂದಣಿ ಸಂಖ್ಯೆಯ ಘನಲಾರಿ ರಸ್ತೆಯಲ್ಲಿ ನಿಂತಿರುವುದು ಕಂಡುಬಂದಿದೆ. ಈ ಬಗ್ಗೆ ಲಾರಿಯ ಚಾಲಕ, ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಇರ್ಫಾನ್ ಪಾಷಾ (40) ಎಂಬಾತನನ್ನು ವಿಚಾರಿಸಿದಾಗ, ಲಾರಿ ದುರಸ್ತಿಗೀಡಾಗಿರುವುದಾಗಿ ತಿಳಿಸಿದ್ದಾನೆ.

ಬಳಿಕ ಲಾರಿಯಲ್ಲಿದ್ದ ಮಣ್ಣಿನ ಲೋಡ್ ಬಗ್ಗೆ ವಿಚಾರಿಸಿದಾಗ, ಯಾವುದೇ ಪರವಾನಿಗೆ ಅಥವಾ ಸಂಬಂಧಿತ ದಾಖಲೆಗಳಿಲ್ಲದೆ ಅಕ್ರಮವಾಗಿ ಕೆಂಪು ಲ್ಯಾಟರೈಟ್ ಮಣ್ಣನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 229/2026ರಂತೆ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 303(2), MMDR ಕಾಯ್ದೆ 1957ರ ಕಲಂ 4(1), 4(1A), 21 ಹಾಗೂ ಕರ್ನಾಟಕ ಸಣ್ಣ ಖನಿಜ ರಿಯಾಯಿತಿ ನಿಯಮಗಳು 1994ರ ಕಲಂ 3 ಮತ್ತು 44ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!