ಹಾಡಹಗಲೇ ತಾಯಿ, ಮಗನ ಕಲ್ಲಿನಿಂದ ಜಜ್ಜಿ ಭೀಕರ ಹತ್ಯೆ
ಹಾನಗಲ್: ಸುದೀರ್ಘ 20 ವರ್ಷಗಳ ಆಸ್ತಿ ವಿವಾದ ಹಾಗೂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ತಾಯಿ ಮತ್ತು ಮಗನನ್ನು ಕಲ್ಲಿನಿಂದ ಜಜ್ಜಿ ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಪ್ರೇಮಾ ಬಡಿಗೇರ (55) ಹಾಗೂ ಅವರ ಮಗ ಅವಿನಾಶ್ ಬಡಿಗೇರ (35) ಹತ್ಯೆಯಾದ ದುರದೃಷ್ಟಕರ ತಾಯಿ-ಮಗ. ತಿರಕಯ್ಯ ಹೀರೆಮಠ ಹಾಗೂ ಬಸವರಾಜ್ ಹೊಸಮಠ ಕೊಲೆಗೈದ ಆರೋಪಿಗಳು.
ಮೃತ ಪ್ರೇಮಾ ಬಡಿಗೇರ ಕೆಇಬಿಯಲ್ಲಿ ಉದ್ಯೋಗಿಯಾಗಿದ್ದರೆ, ಅವರ ಮಗ ಅವಿನಾಶ್ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು 20 ವರ್ಷಗಳ ಹಿಂದೆ ಕೂಸನೂರು ಗ್ರಾಮದಲ್ಲಿದ್ದ ಮನೆ ಹಾಗೂ 4 ಗುಂಟೆ ಖಾಲಿ ಜಾಗವನ್ನು ಆರೋಪಿ ತಿರಕಯ್ಯ ಹೀರೆಮಠ ಕುಟುಂಬಕ್ಕೆ ಪ್ರೇಮಾ ಮಾರಾಟ ಮಾಡಿದ್ದರು. ಆದರೆ ಹಣಕಾಸಿನ ವ್ಯವಹಾರ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ನಡುವೆ ಭಾರಿ ವಿವಾದ ಶುರುವಾಗಿತ್ತು. ಗ್ರಾಮಸ್ಥರು ಹಲವು ಬಾರಿ ರಾಜಿ ಪಂಚಾಯಿತಿ ನಡೆಸಿದರೂ ಸಮಸ್ಯೆ ಬಗೆಹರಿಯದೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.




