September 26, 2026

ನಿದ್ರೆಯಲ್ಲಿದ್ದ ಮಗುವಿನ ಮೇಲೆ ಬಿದ್ದ ವಾಲ್ ಫ್ಯಾನ್: ಮಗು ಮೃತ್ಯು

0
image_editor_output_image1911622545-1790405704496

ಮಲಪ್ಪುರಂ : ತಂದೆ-ತಾಯಿ ದುಡಿಯುತ್ತಿದ್ದ ದನದ ಕೊಟ್ಟಿಗೆಯ ಪಕ್ಕದ ತಾತ್ಕಾಲಿಕ ಶೆಡ್‌ನಲ್ಲಿ ಶಾಂತವಾಗಿ ನಿದ್ರಿಸುತ್ತಿದ್ದ ಐದೇ ಐದು ತಿಂಗಳ ಕಂದಮ್ಮನ ಮೇಲೆ, ವಿಪರೀತ ಶಾಖಕ್ಕೆ ಕರಗಿದ ‘ವಾಲ್ ಫ್ಯಾನ್’ ಬಿದ್ದು ಮಗು ದಾರುಣವಾಗಿ ಸಜೀವ ದಹನಗೊಂಡ ಹೃದಯವಿದ್ರಾವಕ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಎಡವನ್ನ ಬಳಿಯ ಜ್ಯೋತಿಗಿರಿ ಎಸ್ಟೇಟ್‌ನಲ್ಲಿ ನಡೆದಿದೆ. ದುರಂತದಲ್ಲಿ ಸಜೀವ್ ಮತ್ತು ರೇಷ್ಮಾ ದಂಪತಿಯ 5 ತಿಂಗಳ ಹೆಣ್ಣು ಮಗು ‘ಶ್ರೀಭದ್ರಾ’ ಅಕಾಲಿಕವಾಗಿ ಪ್ರಾಣ ಕಳೆದುಕೊಂಡ ಕಂದಮ್ಮ.

ಕಲಾಡಿ ಮೂಲದ ಸಜೀವ್ ಮತ್ತು ಕೊಲ್ಲಂ ಮೂಲದ ರೇಷ್ಮಾ ದಂಪತಿ ಕಳೆದ ಒಂದು ವರ್ಷದಿಂದ ಜ್ಯೋತಿಗಿರಿ ಎಸ್ಟೇಟ್‌ನ ಹಸುವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ 5 ವರ್ಷದ ಶಿವದ್ ಎಂಬ ಮಗ ಹಾಗೂ 5 ತಿಂಗಳ ಹೆಣ್ಣು ಮಗು ಶ್ರೀಭದ್ರಾ ಇದ್ದಳು. ಬುಧವಾರ ಮಧ್ಯಾಹ್ನ ಮಗುವನ್ನು ತಾತ್ಕಾಲಿಕ ಮನೆಯ ಹಾಸಿಗೆಯ ಮೇಲೆ ಮಲಗಿಸಿ, 5 ವರ್ಷದ ಮಗ ಶಿವದ್‌ನನ್ನು ಜತೆಯಲ್ಲಿ ಕರೆದುಕೊಂಡು ದಂಪತಿ ಕೇವಲ 200 ಮೀಟರ್ ದೂರದಲ್ಲಿದ್ದ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುವ ಕೆಲಸಕ್ಕೆ ತೆರಳಿದ್ದರು. ಕೊಠಡಿಯಲ್ಲಿ ತಾಪಮಾನ ಹೆಚ್ಚಿದ್ದ ಕಾರಣ, ಮಗುವಿಗೆ ಶೆಕೆ ಆಗದಿರಲಿ ಎಂದು ಪೆಡಸ್ಟಲ್ ಫ್ಯಾನ್ ಹಾಗೂ ಗೋಡೆಗೆ ಅಳವಡಿಸಿದ್ದ ವಾಲ್ ಫ್ಯಾನ್ ಎರಡನ್ನೂ ಆನ್ ಮಾಡಿ ಹೋಗಿದ್ದರು.

ಸಂಜೆ 4 ಗಂಟೆಯ ಸುಮಾರಿಗೆ ಸಜೀವ್ ಹಾಲು ಕರೆದು ಬೈಕ್ ಮೇಲೆ ಹಾಲಿನ ಪಾತ್ರೆ ಇಡುತ್ತಿದ್ದಾಗ, ತಮ್ಮ ತಾತ್ಕಾಲಿಕ ಮನೆಯಿಂದ ಹೊಗೆ ಬರುವುದನ್ನು ಗಮನಿಸಿದ್ದಾರೆ. ತಕ್ಷಣ ಗ್ಯಾಸ್ ಸೋರಿಕೆಯಾಗಿರಬಹುದು ಎಂದು ಭಾವಿಸಿ ಓಡಿ ಹೋಗಿ ಬಾಗಿಲು ತೆಗೆದು ನೋಡಿದಾಗ ಆಘಾತಕಾರಿ ದೃಶ್ಯ ಕಂಡುಬಂದಿದೆ. ನಿರಂತರವಾಗಿ ಓಡುತ್ತಿದ್ದ ಗೋಡೆ ಫ್ಯಾನ್ ವಿಪರೀತ ಬಿಸಿಯಾಗಿ ಕರಗಿ ನೇರವಾಗಿ ಮಗು ಮಲಗಿದ್ದ ಹಾಸಿಗೆಯ ಮೇಲೆಯೇ ಬಿದ್ದಿತ್ತು. ಫ್ಯಾನ್‌ನ ಪ್ಲಾಸ್ಟಿಕ್ ಭಾಗಗಳು ಕರಗಿ ಬಿದ್ದಿದ್ದರಿಂದ ಹಾಸಿಗೆ ಮತ್ತು ಬೆಡ್‌ಶೀಟ್‌ಗೆ ಬೆಂಕಿ ಹೊತ್ತಿಕೊಂಡು ಹೊಗೆ ಏಳುತ್ತಿತ್ತು. ತಕ್ಷಣ ತಂದೆ ಮಗುವನ್ನು ಎತ್ತಿಕೊಂಡು ಹೊರ ಓಡಿ ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಧಾವಿಸಿದರಾದರೂ, ತೀವ್ರ ಸ್ವರೂಪದ ಸುಟ್ಟ ಗಾಯಗಳಿಂದಾಗಿ ಮಗು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿತ್ತು.

 

Leave a Reply

Your email address will not be published. Required fields are marked *

error: Content is protected !!