ಬಿಜೆಪಿ ವತಿಯಿಂದ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಮಾಣಿಲ ಗ್ರಾ.ಪಂ ಮುಂಭಾಗ ಪ್ರತಿಭಟನೆ
ವಿಟ್ಲ: ಸಾರ್ವಜಿನಿಕರ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುವ ಪ್ರಯತ್ನ ಕಾಂಗ್ರೆಸ್ ಸರಕಾರದಿಂದ ಆಗುತ್ತಿಲ್ಲ. ಹಾಲಿ ಶಾಸಕರು ಕ್ಷೇತ್ರ ವ್ಯಾಪ್ರಿಯಲ್ಲಿ ಬಹಳಷ್ಟು ಕಾಮಗಾರಿ ನಡೆದಿದೆ. ಕೋಟಿಗಟ್ಟಲೆ ಅನುದಾನ ತಂದಿದ್ದೇನೆ ಎನ್ನುತ್ತಾರೆ. ಅಭಿವೃದ್ಧಿಯ ಬಗ್ಗೆ ಜನರಲ್ಲಿ ಕೇಳಿದಾಗ ಅದು ಕೇವಲ ರೀಲ್ಸ್ ಗೆ ಮಾತ್ರ ಎನ್ನುತ್ತಾರೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಆರ್. ಸಿ. ನಾರಾಯಣ್ ಹೇಳಿದರು.
ಅವರು ವಿಟ್ಲದ ಮಾಣಿಲ ಗ್ರಾಮ ಪಂಚಾಯತಿ ಸಮೀಪ ನಡೆದ ಭಾರತೀಯ ಜನತಾ ಪಾರ್ಟಿ ದ.ಕ.ಜಿಲ್ಲೆ ಇದರ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ನಡೆಯುತ್ತಿರುವ ’ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್/ನಗರಾಡಳಿತ ಕಚೇರಿಗಳ ಎದುರು ನಡೆಯುತ್ತಿರುವ ’ ನಮ್ಮ ಹಕ್ಕು ನಮಗೆ ನೀಡಿ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಮಾಣಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಮಾತನಾಡಿ ಪಂಚಾಯತಿಗೆ ಆಡಳಿತಾಧಿಕಾರಿ ನೇಮಕ ಆಗುವ ತನಕದ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನ ಸಾಧನೆ ಶೂನ್ಯ ಎಂದರು. ಅಭಿವೃದ್ಧಿಗೆ ಸರಕಾರದ ಅನುದಾನಗಳೂ ಬರುತ್ತಿಲ್ಲ ಎಂದರು
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಯಾದವ್, ಮಾಣಿಲ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಗೀತಾನಂದ ಶೆಟ್ಟಿ ಮಾತನಾಡಿದರು.
ಮಾಣಿಲ ಸೊಸೈಟಿ ಬಯಿಂದ ಪಂಚಾಯಿತಿ ವರೆಗೆ ಪಾದಯಾತ್ರೆಯನ್ನು ನಡೆಸಲಾಯಿತು.
ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಮಹಾಶಕ್ತಿಕೇಂದ್ರದ ಮತ್ತು ಶಕ್ತಿ ಕೇಂದ್ರದ ಪದಾಧಿಕಾರಿಗಳು, ಪಂಚಾಯಿತಿ ಮಾಜಿ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
,,,,,,,,,,




