ಮನೆಯಲ್ಲಿದ್ದ ಹಣ, ಚಿನ್ನಾಭರಣ ತೋರಿಸಿ ರೀಲ್ಸ್: ಯೂಟ್ಯೂಬರ್ ಮನೆಗೆ ಕನ್ನ ಹಾಕಿದ ಕಳ್ಳರು
ಚೆನ್ನೈ: ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ತಮಿಳುನಾಡಿನ ಯೂಟ್ಯೂಬರ್ ಒಬ್ಬರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.
ನಾಗರ್‌ಕೋಯಿಲ್ ಸಮೀಪದ ತಮ್ಮತುಕೋನಂನ ವಿಐಪಿ ಗಾರ್ಡನ್‌ನಲ್ಲಿ ವಾಸವಾಗಿರುವ ಯೂಟ್ಯೂಬರ್ ವಿನೋತ್ ಕುಮಾರ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 944 ಗ್ರಾಂ ಚಿನ್ನ ಮತ್ತು ನಗದನ್ನು ಕಳ್ಳರು ದೋಚಿದ್ದಾರೆ.
ಇತ್ತೀಚೆಗೆ, ದಂಪತಿ ತಮ್ಮ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಧುಮಿತಾ ತನ್ನ ಮಗಳ ಮೇಲೆ ಹಣವನ್ನು ಸುರಿಯುವುದು, ಚಿನ್ನಾಭರಣಗಳನ್ನು ಪ್ರದರ್ಶಿಸುವುದು ಸೆರೆಯಾಗಿದೆ.
ಮನೆಯಲ್ಲಿ ಯೂಟ್ಯೂಬರ್ ವಿನೋತ್ ಕುಮಾರ್, ಪತ್ನಿ ಮಧುಮಿತಾ ವಾಸವಾಗಿದ್ದರು. ರಾತ್ರಿಯ ವೇಳೆ ಅಪರಿಚಿತರು ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.





