ವಿಮಾನದಲ್ಲಿ ಪೈಲಟ್ ಗಾಂಜಾ ಸೇವನೆ ಪ್ರಕರಣ: ಎಲ್ಲ ಪೈಲಟ್‌ಗಳಿಗೆ ಡ್ರಗ್ ಪರೀಕ್ಷೆ ಕಡ್ಡಾಯಗೊಳಿಸಿದ ಏರ್ ಇಂಡಿಯಾ
ನವದೆಹಲಿ: ಕಳೆದ ವಾರ ಫುಕೆಟ್‌ನಿಂದ ದಿಲ್ಲಿಗೆ ಆಗಮಿಸುತ್ತಿದ್ದಾಗ ಏಕಾಏಕಿ ಎತ್ತರವನ್ನು ಕಳೆದುಕೊಡು ಪ್ರಯಾಣಿಕರಿಗೆ ಜೀವಭೀತಿ ಮೂಡಿಸಿದ್ದ ವಿಮಾನದ ಮುಖ್ಯ ಪೈಲಟ್ ಗಾಂಜಾ ಸೇವಿಸಿದ್ದು ದೃಢಪಟ್ಟಿರುವ ಬೆನ್ನಲ್ಲೇ, ಏರ್ ಇಂಡಿಯಾ ಸಂಸ್ಥೆಯು ತನ್ನ ಎಲ್ಲ ಪೈಲಟ್‌ಗಳು ವಿಮಾನ ಹಾರಾಟಕ್ಕೂ ಮುನ್ನ ಮಾದಕ ದ್ರವ್ಯ ಸೇವನೆ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಲಿದೆ ಎಂದು ಗುರುವಾರ ತಿಳಿಸಿದೆ.
ಆಗಸ್ಟ್ 4ರಂದು ಫುಕೆಟ್-ದಿಲ್ಲಿ AI 2379 ವಿಮಾನವು ಹಾರಾಟದ ಮಧ್ಯದಲ್ಲೇ ಇದ್ದಕ್ಕಿದ್ದಂತೆ 300 ಅಡಿ ಕೆಳಕ್ಕಿಳಿದ ಪರಿಣಾಮ ನಾಲ್ವರು ಸಿಬ್ಬಂದಿ ಸೇರಿದಂತೆ 24 ಜನರು ಗಾಯಗೊಂಡಿದ್ದರು. ಏರ್ ಇಂಡಿಯಾ ತನ್ನ ಆರಂಭಿಕ ಹೇಳಿಕೆಯಲ್ಲಿ ವಾಯು ಪ್ರಕ್ಷುಬ್ಧತೆ ಇದಕ್ಕೆ ಕಾರಣ ಎಂದು ಹೇಳಿತ್ತು. ಆದರೆ ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮುಖ್ಯ ಪೈಲಟ್ ಗಾಂಜಾ ಸೇವಿಸಿದ್ದು ದೃಢಪಟ್ಟಿತ್ತು.
ಏರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ, ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನಿಗದಿಪಡಿಸಿದ ನಿಯಮಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗುವ ಅಗತ್ಯಕ್ಕೆ ಒತ್ತು ನೀಡಿದೆ. ‘ಸುರಕ್ಷತೆ ಮತ್ತು ವೃತ್ತಿಪರತೆಯ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಳ್ಳಲು ಹಾಗೂ ನಮ್ಮ ಪ್ರಯಾಣಿಕರು, ಪಾಲುದಾರರು ಮತ್ತು ಸಮುದಾಯಕ್ಕೆ ನಂಬಿಕೆ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.’ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಅನುಮತಿಸದ ಯಾವುದೇ ಮಾದಕ ವಸ್ತುಗಳು ಅಥವಾ ಔಷಧಗಳನ್ನು ಪೈಲಟ್‌ಗಳು ಸೇವಿಸಿದ್ದಾರೆಯೇ ಎಂದು ಪರಿಶೀಲಿಸಲು ನಾವು ಎಲ್ಲಾ ಗ್ರೂಪ್ ಪೈಲಟ್‌ಗಳ ಸಂಪೂರ್ಣ ತಪಾಸಣೆ ನಡೆಸಲು ನಿರ್ಧರಿಸಿದ್ದೇವೆ. ಈ ಪರೀಕ್ಷೆಯು ಕಡ್ಡಾಯವಾಗಿದ್ದು, ಇಂದಿನಿಂದಲೇ ಆರಂಭಗೊಂಡಿದೆ’ ಎಂದು ಏರ್ ಇಂಡಿಯಾ ತಿಳಿಸಿದೆ.’ದಶಕಗಳಿಂದಲೂ ಏರ್ ಇಂಡಿಯಾ ಭಾರತೀಯ ವಿಮಾನಯಾನ ರಂಗದ ಪ್ರಮುಖ ಹರಿಕಾರನಾಗಿದೆ. ಈ ಅವಧಿಯಲ್ಲಿ ನಮ್ಮ ಪೈಲಟ್‌ಗಳು ಮತ್ತು ಇತರ ಸಿಬ್ಬಂದಿಯ ವೃತ್ತಿಪರತೆ, ಕೌಶಲ್ಯ ಮತ್ತು ಸುರಕ್ಷತೆಯ ಬದ್ಧತೆಯು ಲಕ್ಷಾಂತರ ಪ್ರಯಾಣಿಕರು ಮತ್ತು ವಿಶಾಲ ಸಮುದಾಯದ ನಂಬಿಕೆಯನ್ನು ಗಳಿಸಿದೆ. ಈ ನಂಬಿಕೆಯು ನಮಗೆ ಅತ್ಯಂತ ಪ್ರಮುಖ ಆಸ್ತಿಯಾಗಿದೆ ಮತ್ತು ಅದನ್ನು ರಕ್ಷಿಸುವುದು ಹಾಗೂ ಮುಂದುವರಿಸಿಕೊಂಡು ಹೋಗುವುದು ಅತ್ಯಗತ್ಯವಾಗಿದೆ ಎಂದು ಸಂಸ್ಥೆಯು ಹೇಳಿದೆ.




