ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ
ಕೋಲ್ಕತ್ತ: ಅರ್ಜೆಂಟೀನಾದ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರು ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದ ಸಂಘಟಕ ಸತದ್ರು ದತ್ತಾ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕ್ರೀಡಾಂಗಣದಲ್ಲಿ ಭಾರಿ ಅವ್ಯವಸ್ಥೆ ಉಂಟಾದ ಕಾರಣ ಮೆಸ್ಸಿ ಅವರು ಸ್ವಲ್ಪ ಹೊತ್ತಿನಲ್ಲೇ ಕ್ರೀಡಾಂಗಣದಿಂದ ಹೊರನಡೆಯಬೇಕಾಯಿತು. ಹೀಗಾಗಿ, ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಹೈದರಾಬಾದ್‌ನತ್ತ ಪ್ರಯಾಣ ಆರಂಭಿಸಿದ ಮೆಸ್ಸಿ ಮತ್ತು ತಂಡವನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಹೋಗಿದ್ದ ದತ್ತಾ ಅವರನ್ನು ಅಲ್ಲಿಯೇ ಬಂಧಿಸಲಾಗಿದೆ.
‘ಕ್ರೀಡಾಂಗಣದಲ್ಲಿ ಉಂಟಾದ ಗದ್ದಲಕ್ಕೆ ಸಂಬಂಧಿಸಿದಂತೆ, ಸಂಘಟಕರ ಕಡೆಯಿಂದ ಏನಾದರೂ ತಪ್ಪಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ದತ್ತಾ ಅವರನ್ನು ಬಂಧಿಸಿದ್ದೇವೆ. ಪೊಲೀಸರು ಕ್ರೀಡಾಂಗಣದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ’ ಎಂದು ಪಶ್ಚಿಮ ಬಂಗಾಳ ಪೊಲೀಸ್ ಮಹಾ ನಿರ್ದೇಶಕ ರಾಜೀವ್ ಕುಮಾರ್ ಹೇಳಿದ್ದಾರೆ.





