ಬನ್ನೇರುಘಟ್ಟ: ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ
ಬೆಂಗಳೂರು: ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೋಚಕ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ದರೋಡೆ ಮಾಡಲಾಗಿದ್ದ ಹಣದ ಪೈಕಿ 10 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ನಿಖಿಲ್, ಪ್ರಶಾಂತ್ ಅಲಿಯಾಸ್ ಪಿಂಕಿ, ಅರುಣ್ ಕುಮಾರ್, ಹರೀಶ್ ಮತ್ತು ಈ ಕೃತ್ಯದ ಮಾಸ್ಟರ್ ಮೈಂಡ್ ರಕ್ಷಿತ್ ಎಂದು ಗುರುತಿಸಲಾಗಿದೆ.
ಶ್ರೀ ಕೈಲಾಸ್ ಎಂಬುವವರು ‘ಉಡಾನ್’ ಕಂಪನಿಯಲ್ಲಿ ಹಣ ಸಂಗ್ರಹಣೆ ಮಾಡುವ ಕೆಲಸ ಮಾಡುತ್ತಿದ್ದರು. ಫೆಬ್ರವರಿ 1ರಂದು ಅವರು ಸುಮಾರು 31,38,625 ರೂಪಾಯಿಗಳನ್ನು ಸಂಗ್ರಹಿಸಿ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಮಾಹಿತಿ ಅರಿತಿದ್ದ ಆರೋಪಿಗಳು ಎರಡು ಬೈಕ್‌ಗಳಲ್ಲಿ ಕೈಲಾಸ್ ಅವರನ್ನು ಹಿಂಬಾಲಿಸಿದ್ದರು.
ನಿರ್ಜನ ಪ್ರದೇಶದಲ್ಲಿ ಸಿನಿಮೀಯ ಮಾದರಿಯಲ್ಲಿ ಬೈಕ್ ಅಡ್ಡಗಟ್ಟಿದ ದರೋಡೆಕೋರರ ತಂಡ, ಲಾಂಗ್‌ನಿಂದ ಹಲ್ಲೆ ನಡೆಸಿ ಹಣದ ಚೀಲ ಹಾಗೂ ಬೈಕ್ ಅನ್ನು ಕಿತ್ತುಕೊಂಡು ಪರಾರಿಯಾಗಿತ್ತು. ಸ್ವಲ್ಪ ದೂರ ಸಾಗಿದ ಬಳಿಕ ಸಾಕ್ಷ್ಯ ನಾಶಪಡಿಸಲು ಬೈಕ್ ಅನ್ನು ರಸ್ತೆಯಲ್ಲೇ ಬಿಟ್ಟು ಹಣದೊಂದಿಗೆ ಪರಾರಿಯಾಗಿದ್ದರು.




