January 31, 2026

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮಾರಾಟಕ್ಕೆ!

0
IMG-20251106-WA0001.jpg

ಬೆಂಗಳೂರು: ಭಾರತೀಯ ಪ್ರೀಮಿಯರ್‌ ಲೀಗ್‌ ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಮಾರಾಟಕ್ಕೆ ಸಿದ್ಧವಾಗಿದೆ. ತಂಡದ ಪ್ರಸ್ತುತ ಮಾಲೀಕರಾದ ಡಿಯಾಜಿಯೊ ಕಂಪೆನಿಯು ಅಧಿಕೃತವಾಗಿ ಮಾರಾಟ ಪ್ರಕ್ರಿಯೆ ಆರಂಭಿಸಿರುವುದಾಗಿ ಬುಧವಾರ ಬಾಂಬೆ ಷೇರು ವಿನಿಮಯ ಕೇಂದ್ರಕ್ಕೆ (ಬಿಎಸ್‌ಇ) ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟಕ್ಕಿಡಲಾಗುತ್ತಿರುವ ಬಗ್ಗೆ ಖುದ್ದು ಡಿಯಾಜಿಯೊ ಮಾಹಿತಿ ನೀಡಿದೆ. ಅಲ್ಲದೆ “ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ನಲ್ಲಿನ ಹೂಡಿಕೆಯ ಮೌಲ್ಯಮಾಪನಕ್ಕೆ ಮುಂದಾಗುತ್ತಿರುವುದಾಗಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಗೆ ನೀಡಿದ ಸಂವಹನದಲ್ಲಿ ತಿಳಿಸಿದೆ.

“USL ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ RCSPL ನಲ್ಲಿನ ಹೂಡಿಕೆಯ ಕಾರ್ಯತಂತ್ರದ ಪರಿಶೀಲನೆಯನ್ನು ಪ್ರಾರಂಭಿಸುತ್ತಿದೆ” ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. RCSPL ನ ವ್ಯವಹಾರವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರ್ಷಿಕವಾಗಿ ಆಯೋಜಿಸುವ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸ್ ತಂಡಗಳ ಮಾಲೀಕತ್ವವನ್ನು ಒಳಗೊಂಡಿದೆ.

ಷೇರು ವಿನಿಮಯ ಕೇಂದ್ರಕ್ಕೆ ಬರೆದಿರುವ ಕವರಿಂಗ್ ಲೆಟರ್‌ನಲ್ಲಿ, ಡಿಯಾಜಿಯೊ ಮತ್ತು ಯುಎಸ್‌ಎಲ್, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ ನಿಯಮ 30 ರ ಅಡಿಯಲ್ಲಿ ಫ್ರಾಂಚೈಸಿಯ ಮಾರಾಟವನ್ನು ಬಹಿರಂಗಪಡಿಸುತ್ತಿದ್ದೇವೆ ಎಂದು ತಿಳಿಸಲಾಗಿದೆ. ಅಲ್ಲದೆ ಈ ಪ್ರಕ್ರಿಯೆಯು ಮಾರ್ಚ್ 31, 2026 ರೊಳಗೆ ಪೂರ್ಣಗೊಳಿಸುವುದಾಗಿ ಹೇಳಿಕೊಂಡಿದೆ. ಅಂದರೆ ಮುಂದಿನ ಸೀಸನ್ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬದಲಾಗುವುದು ಖಚಿತ.

ಇದಕ್ಕೂ ಮುನ್ನ ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಡಿಯಾಜಿಯೊ ಕಂಪೆನಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು.

ಅಲ್ಲದೆ ಐಪಿಎಲ್ 2026 ಕ್ಕೂ ಮುನ್ನ ಒಟ್ಟಾರೆಯಾಗಿ ಲಭ್ಯವಿರುವ ಏಕೈಕ ತಂಡವಾಗಿ ಆರ್ಸಿಬಿ ಮಾರಾಟವಾಗಬಹುದು. ಬಿಗ್ ಗ್ಲೋಬಲ್ ಫಂಡ್‌ಗಳಲ್ಲಿ ಒಂದು ಅಥವಾ ಬೃಹತ್ ಹೂಡಿಕೆದಾರರು ಆರ್ಸಿಬಿ ತಂಡವನ್ನು ಖರೀದಿಸುವ ಸಾಧ್ಯತೆಯಿದೆ ಎಂದು ಲಲಿತ್ ಮೋದಿ ತಿಳಿಸಿದ್ದರು. ಅದರಂತೆ ಇದೀಗ ಡಿಯಾಜಿಯೋ ಕಂಪೆನಿ ಆರ್ಸಿಬಿ ಫ್ರಾಂಚೈಸಿಯ ಮಾರಾಟಕ್ಕೆ ಮುಂದಾಗಿದ್ದು, ಬೆಂಗಳೂರು ಫ್ರಾಂಚೈಸಿಯನ್ನು ಯಾರು ಖರೀದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!