‘ಜನ ಗಣ ಮನ’ ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ರಚಿಸಿದ್ದ ಗೀತೆ: ಸಂಸದ ಕಾಗೇರಿ ವಿವಾದಾತ್ಮಕ ಹೇಳಿಕೆ
ಹೊನ್ನಾವರ: ಜನಗಣಮನ ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ರಚಿಸಿದ್ದ ಗೀತೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದು, ಈ ಹೇಳಿಕೆ ವಿವಾದ ಸೃಷ್ಟಿಸಿದೆ.
ಹೊನ್ನಾವರದಲ್ಲಿ ಬುಧವಾರ ಸರ್ದಾರ್ ವಲ್ಲಭಬಾಯಿ ಪಟೇಲ್ 150ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಏಕತೆಗಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಂದೇ ಮಾತರಂ ಗೀತೆ ರಾಷ್ಟ್ರಗೀತೆಗೆ ಸರಿಸಮನಾಗಿದೆ. ಈ ಗೀತೆಗೆ ದೇಶದಲ್ಲಿ ಪ್ರಾಮುಖ್ಯತೆ ನೀಡಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಇದೇ ಗೀತೆ ಪ್ರೇರಣೆ ನೀಡಿತ್ತು ಎಂದರು. ವಂದೇ ಮಾತರಂ ಗೀತೆ ರಾಷ್ಟ್ರಗೀತೆ ಆಗಬೇಕು ಎಂಬ ಕೂಗು ಬಲವಾಗಿತ್ತು. ಪೂರ್ವಜರು ವಂದೇ ಮಾತರಂ ಜೊತೆಗೆ ಜನಗಣಮನವನ್ನು ರಾಷ್ಟ್ರಗೀತೆ ಎಂದು ಒಪ್ಪಿಕೊಂಡರು ಎಂದರು.
ನಾವು ಇಂದು ಅದನ್ನು (ಜನ ಗಣ ಮನ) ಒಪ್ಪಿಕೊಂಡು ಪಾಲಿಸುತ್ತಿದ್ದೇವೆ. ಆದರೆ, ವಂದೇ ಮಾತರಂ ಗೀತೆಯ 150ನೇ ವರ್ಷದಲ್ಲಿ, ಅದು ಮತ್ತೆ ಜನರ ಕಂಠ ಕಂಠಗಳಲ್ಲಿ ಪ್ರತಿಧ್ವನಿಸಬೇಕು. ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆಯು ನಮ್ಮ ಉಸಿರಿನ ಭಾಗವಾಗುವಂತೆ ಆಗಬೇಕು. ನಾಡಿನ ಜನರ ಮಧ್ಯೆ ಆ ‘ವಂದೇ ಮಾತರಂ’ ಹಾಡು ಕಂಠಸ್ವರವಾಗಿ ಮೊದಲು ಮೊಳಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆ ನೀಡಿದರು.




