ಸ್ಯಾಂಡಲ್’ ವುಡ್ ಖ್ಯಾತ ಖಳನಟ ಹರೀಶ್ ರಾಯ್ ನಿಧನ
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಪೋಷಕ ನಟ ಹಾಗೂ ಖಳನಟರಾಗಿ ಖ್ಯಾತಿ ಪಡೆದಿದ್ದ ಹರೀಶ್ ರಾಯ್ ಇಂದು (ಗುರುವಾರ) ನಿಧನರಾಗಿದ್ದಾರೆ.
ಹರೀಶ್ ರಾಯ್ ಅವರು ಕಳೆದ ಕೆಲ ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಟ ಯಶ್, ದರ್ಶನ್, ಧ್ರುವ ಸರ್ಜಾ ಸೇರಿದಂತೆ ಇನ್ನೂ ಹಲವರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಹರೀಶ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿರುವ ಇವರು ಕನ್ನಡ ಮಾತ್ರವಲ್ಲದೆ, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ‘ಓಂ’ ಚಿತ್ರದಲ್ಲಿನ ‘ರಾಯ್’ ಪಾತ್ರದಿಂದ ಗಮನ ಸೆಳೆದ ಇವರು, ಸಾಕಷ್ಟು ಚಿತ್ರಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಕಾರ್ಯ ನಿರ್ವಹಿಸಿದ್ದಾರೆ.
ಬೆಂಗಳೂರು ಅಂಡರ್ ವರ್ಲ್ಡ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ, ಓಂ ಹಾಗೂ ಸ್ಯಾಂಡಲ್ವುಡ್ನ ಟಾಪ್ ಸಿನಿಮಾ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2ರಲ್ಲಿ ಅಭಿನಯಿಸಿದ್ದಾರೆ. ಕೆಜಿಎಫ್, ಓಂ, ಮೆಜೆಸ್ಟಿಕ್, ಜೋಡಿಹಕ್ಕಿ, ಚಕ್ರವರ್ತಿ, ಕಾಶಿ, ಸಂಜು ವೆಡ್ಸ್ ಗೀತಾ ಹಾಗು ನಲ್ಲ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಜಿಎಫ್ ಸಿನಿಮಾದ ಬಳಿಕ ಅವರು ʼಕೆಜಿಎಫ್ ಚಾಚಾʼ ಎಂದೇ ಖ್ಯಾತಿ ಪಡೆದಿದ್ದರು.




