ಕ್ಯಾಂಟೀನ್ ನಲ್ಲಿ ಗೋಮಾಂಸ ನಿಷೇಧಿಸಿದ ಬ್ಯಾಂಕ್ ಮ್ಯಾನೇಜರ್: ಕ್ಯಾಂಟೀನ್‌ನಲ್ಲಿ ‘beef fest’ ಆಯೋಜನೆ ಮಾಡಿದ ಬ್ಯಾಂಕ್ ಸಿಬ್ಬಂದಿ
ಕೊಚ್ಚಿನ್: ಕ್ಯಾಂಟೀನ್ ನಲ್ಲಿ ಗೋಮಾಂಸ ನಿಷೇಧಿಸಿದ ಮ್ಯಾನೇಜರ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆನರಾ ಬ್ಯಾಂಕ್ ಸಿಬ್ಬಂದಿ ‘beef fest’ ಆಯೋಜನೆ ಮಾಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.
ಕೇರಳದ ಕೊಚ್ಚಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ರೀಜನಲ್ ಮ್ಯಾನೇಜರ್‌ನಿಂದ ಕ್ಯಾಂಟೀನ್‌ನಲ್ಲಿ ಗೋಮಾಂಸ ನಿಷೇಧಿಸಿದ ಆದೇಶದ ವಿರುದ್ಧ ಬ್ಯಾಂಕ್ ಉದ್ಯೋಗಿಗಳು ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದ್ದಾರೆ.
ಈ ಆದೇಶವನ್ನು ವಿರೋಧಿಸಿ, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ (BEFI) ನೇತೃತ್ವದಲ್ಲಿ ಉದ್ಯೋಗಿಗಳು ಬ್ಯಾಂಕ್ ಕಟ್ಟಡದ ಮುಂಭಾಗದಲ್ಲಿ ‘ಗೋಮಾಂಸ ಪಾರ್ಟಿ’ (Beef Fest) ಆಯೋಜಿಸಿ, ಗೋಮಾಂಸ ಮತ್ತು ಪರೋಟವನ್ನು (Beef Party) ಸೇವಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಈ ಕ್ಯಾಂಟೀನ್‌ನಲ್ಲಿ ವಾರದ ಕೆಲವು ದಿನಗಳಲ್ಲಿ ಗೋಮಾಂಸವನ್ನು ಒಳಗೊಂಡಂತೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಹೊಸದಾಗಿ ನೇಮಕಗೊಂಡ ಮ್ಯಾನೇಜರ್ ತಾನು ಗೋಮಾಂಸ ಸೇವಿಸದ ಕಾರಣ, ಕ್ಯಾಂಟೀನ್‌ನಲ್ಲಿ ಇದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಉದ್ಯೋಗಿಗಳು ದೂರಿದ್ದಾರೆ.
ಮೂಲಗಳ ಪ್ರಕಾರ ಬಿಹಾರ ಮೂಲದ ಅಶ್ವಿನಿ ಕುಮಾರ್ ಎಂಬುವವರು ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ಕೆನರಾ ಬ್ಯಾಂಕ್ ಶಾಖೆಗೆ ರೀಜನಲ್ ಮ್ಯಾನೇಜರ್ ಆಗೆ ಬಂದಿದ್ದರು. ಈ ವೇಳೆ ಕಚೇರಿ ಕ್ಯಾಂಟೀನ್ ನಲ್ಲಿ ಗೋಮಾಂಸ ನಿಷೇಧಿಸಿದ್ದರು. ಇದು ಬ್ಯಾಂಕಿನ ಕೆಲ ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ನೇರವಾಗಿ ಸಿಬ್ಬಂದಿಗಳು “ಗೋಮಾಂಸ ಉತ್ಸವ”ವನ್ನು ಆಯೋಜಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.





