March 4, 2026

ಶಿವಮೊಗ್ಗ: 1 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ

0
image_editor_output_image2082627482-1772582162729.jpg

ಶಿವಮೊಗ್ಗ: ಶಿಕ್ಷಕರೊಬ್ಬರ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಸರ್ಕಾರಿ ಭತ್ಯೆಗಳನ್ನು ಮಂಜೂರು ಮಾಡುವುದಕ್ಕಾಗಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಮತ್ತು ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಭದ್ರಾವತಿ ಬಿಇಒ ಎ.ಕೆ. ನಾಗೇಂದ್ರಪ್ಪ ಹಾಗೂ ಮಧ್ಯವರ್ತಿಯಾಗಿದ್ದ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ಶಿಕ್ಷಕರಾದ ಲಿಂಗರಾಜು ಅವರು 2011ರಿಂದ 2023ರವರೆಗೆ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿ ಮತ್ತು ಇತರೆ ಭತ್ಯೆಗಳನ್ನು ಮಂಜೂರು ಮಾಡುವಂತೆ ಹಲವು ಬಾರಿ ಬಿಇಒ ಹಾಗೂ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಆದರೂ ಯಾವುದೇ ಕ್ರಮ ಜರುಗದ ಹಿನ್ನೆಲೆಯಲ್ಲಿ ಅವರು ಕಚೇರಿಗೆ ಅಲೆದಾಡಿ ಸುಸ್ತಾಗಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ಬಿಇಒ ಮತ್ತು ಮಧ್ಯವರ್ತಿ ಸೇರಿ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿ ಒಟ್ಟು 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ಲಿಂಗರಾಜು ಅವರು ಮಾರ್ಚ್ 2ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ಭದ್ರಾವತಿ ಬಿಇಒ ಕಚೇರಿಯ ಕೊಠಡಿಯಲ್ಲಿ ಲಿಂಗರಾಜು ಅವರಿಂದ 1 ಲಕ್ಷ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಲಂಚದ ಹಣವನ್ನು ಜಪ್ತಿ ಮಾಡಲಾಗಿದೆ.ದೂರಿನನ್ವಯ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988 (ತಿದ್ದುಪಡಿ 2018)ರ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!