November 8, 2026

ಬೆಳ್ಳಾರೆ: ಅಕ್ರಮವಾಗಿ ಪಟಾಕಿ ದಾಸ್ತಾನು ಪೊಲೀಸರ ದಾಳಿ: ಪ್ರಕರಣ ದಾಖಲು

0
47119260

ಬೆಳ್ಳಾರೆ: ಯಾವುದೇ ಪರವಾನಿಗೆ ಇಲ್ಲದೆ ಮಾರಾಟದ ಉದ್ದೇಶದಿಂದ ಮನೆಯ ಅಂಗಳದಲ್ಲಿ ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನು ಇರಿಸಿದ್ದ ಪ್ರಕರಣ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಮುಪ್ಪೇರಿಯ ಗ್ರಾಮದ ಉರುಂಬಿಯಲ್ಲಿ ಬೆಳಕಿಗೆ ಬಂದಿದೆ.

ಉರುಂಬಿ ನಿವಾಸಿ ಸುಧಾಕರ ರೈ ಎಂಬವರ ಮನೆಯ ಬಳಿ ಅಕ್ರಮವಾಗಿ ಪಟಾಕಿ ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ಪಡೆದ ಬೆಳ್ಳಾರೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಮುರುಗೇಶ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಅಂಗಳದ ಬಳಿ ಪಟಾಕಿ ಬಾಕ್ಸ್‌ಗಳು ಪತ್ತೆಯಾಗಿವೆ.

ಈ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಮಾರಾಟದ ಉದ್ದೇಶದಿಂದ ಪಟಾಕಿಗಳನ್ನು ತಂದಿರುವುದಾಗಿ ಸುಧಾಕರ ರೈ ತಿಳಿಸಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ಪರವಾನಿಗೆ ಇಲ್ಲದೆ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನ.5ರಂದು ಅ.ಕ್ರ. 66/2026ರಂತೆ ಬಿಎನ್‌ಎಸ್ ಕಲಂ 287, 228 ಹಾಗೂ ಸ್ಫೋಟಕ ಕಾಯ್ದೆಯ ಕಲಂ 9(B)(b)ರಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!