ಪುತ್ತೂರಿನಲ್ಲಿ ಹಲವು ಬಾರಿ ಹಾರಾಟ ನಡೆಸಿದ ಲಘು ವಿಮಾನ: ಕೆಲ ಕಾಲ ಆತಂಕ ಮೂಡಿದ ಬೆನ್ನಲ್ಲೇ ನಿಟ್ಟುಸಿರು ಬಿಟ್ಟ ಜನರು
ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ಮಾರ್ಚ್ 3 ರಂದು ಮಧ್ಯಾಹ್ನ ಸಣ್ಣ ವಿಮಾನಒಂದು ಹಲವು ಬಾರಿ ಭೂಮಿ ಮಟ್ಟಕ್ಕೆ ಅತೀ ಸಮೀಪದಲ್ಲಿ ಹಾರಾಟ ನಡೆಸುತ್ತಿದ್ದ ದೃಶ್ಯ ಕಂಡು ಬಂದಿದ್ದು, ಕೆಲ ಕಾಲ ಆತಂಕ ಮೂಡಿದ ಬೆನ್ನಲ್ಲೇ ಇದು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಸರ್ವೇ ಕಾರ್ಯ ಎಂದು ತಿಳಿದು ಜನರು ನಿಟ್ಟುಸಿರು ಬಿಟ್ಟ ಘಟನೆ ನಡೆದಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಠಾರದ ಗದ್ದೆ ಮೇಲ್ಬಾಗದಲ್ಲಿ ನೆಲ ಮಟ್ಟಕ್ಕೆ ಅತಿ ಸಮೀಪದಲ್ಲಿ ಜೆಟ್ ವಿಮಾನ ಹಾರಾಡುತ್ತಿದ್ದ ದೃಶ್ಯವನ್ನು ಜನರು ನೋಡಿದ್ದು, ಪದೇ ಪದೇ ನಗರದ ವಿವಿಧ ಭಾಗದಲ್ಲಿ ಹಾರಾಟ ನಡೆಸಿದೆ. ಸುಮಾರು10 ರಿಂದ 15 ಸುತ್ತು ಹಾರಾಟ ನಡೆಸಿದೆ.
ಇದು ಯಾರದ್ದು, ಯಾಕೆ ಹಾರಾಟ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿರಲಿಲ್ಲ. ಏಕಾಏಕಿ ವಿಮಾನ ಹಾರಾಟ ನಡೆಸುತ್ತಿದ್ದ ದೃಶ್ಯ ಜನರಲ್ಲಿ ಆತಂಕ ಮೂಡಿಸಿತು. ಕೊನೆಗೂ ಇದು ಭೂಮಿಯ ರಚನೆ, ಅಧ್ಯಯನಕ್ಕೆ ಸಂಬಂಧಿಸಿದಂತೆ ನಡೆ ಸರ್ವೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಚಿಕ್ಕಮಗಳೂರು ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸರ್ವೆ ನಡೆಸುವ ಉದ್ದೇಶದಿಂದ ಈ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿತ್ತು. ಈ ಪ್ರದೇಶದಲ್ಲಿ ವೈಜ್ಞಾನಿಕ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ಭೂಭೌತಿಕ ಸಮೀಕ್ಷೆ ನಡೆಸುತ್ತಿದೆ.




