ನಟಿಯ ಪೋಟೋ, ವಿಡಿಯೋಗಳನ್ನು ಅಸಭ್ಯ ರೀತಿಯಲ್ಲಿ ಚಿತ್ರೀಕರಣ: ಕಾಂತಾರ ನಟಿ ಸಪ್ತಮಿ ಗೌಡ ಆಕ್ರೋಶ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವೀವ್ಸ್ ಗೋಸ್ಕರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರ ಪೋಟೋ ಮತ್ತು ವಿಡಿಯೋಗಳನ್ನು ಅಸಭ್ಯ ರೀತಿಯಲ್ಲಿ ತೆಗೆಯುವವರ ವಿರುದ್ದ ಇದೀಗ ಕನ್ನಡದ ನಟಿಯರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಕಾಂತಾರ ನಟಿ ಸಪ್ತಮಿ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೆ ಇತರ ನಟಿಯರು ಕೂಡ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ
ನಟಿ ಸಪ್ತಮಿ ಗೌಡ ಹಂಚಿಕೊಂಡ ಪೋಸ್ಟ್ ಅನ್ನು ನಟಿಯರಾದ ಬೃಂದಾ ಆಚಾರ್ಯ, ಆಶಿಕಾ ರಂಗನಾಥ್, ರಿತನ್ಯಾ ವಿಜಯ್, ರಮ್ಯಾ, ರಕ್ಷಿತಾ ಪ್ರೇಮ್, ಸಂಜನಾ ಆನಂದ್, ಚೈತ್ರಾ ಜೈ ಆಚಾರ್, ವಾಸುಕಿ ವೈಭವ್, ನಟಿ ಅನುಪಮಾ ಗೌಡ, ನಟ ಯುವರಾಜ್ ಕುಮಾರ್ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡು ಅಂಥವರ ವಿರುದ್ಧ ಕಿಡಿ ಕಾರುತ್ತಿದ್ದಾರೆ.
‘ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೊಗಳು ಮತ್ತು ಫೋಟೊಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ, ನಮ್ಮ ಕಲೆಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ. ಇಂತಹ ವರ್ತನೆ, ಕೆಲವರಿಂದ ನಡೆಯುತ್ತಿರುವುದಾದರೂ, ಇದು ಅವಮಾನಕಾರಿ ಮತ್ತು ಸ್ವೀಕಾರಾರ್ಹವಲ್ಲ’ ಎಂದರು.
ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ನಾವು ಇಲ್ಲಿ ನಮ್ಮ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಚಿತ್ರೀಕರಿಸುವುದು ನಮ್ಮ ಗೌರವಕ್ಕೆ ಧಕ್ಕೆಯಾಗುತ್ತದೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ, ಸಹಿಸುವುದಿಲ್ಲ. ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ, ಮೂಲಭೂತ ಗೌರವ ಮತ್ತು ಶಿಸ್ತನ್ನು ಕಾಪಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಈ ಗಡಿರೇಖೆಯನ್ನು ಸ್ಪಷ್ಟವಾಗಿ ಎಳೆದು, ನಾವು ಒಟ್ಟಾಗಿ ನಿಂತಿದ್ದೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರೆಯುತ್ತದೆ’ ಎಂದಿದ್ದಾರೆ.




