ದುಬೈ: ರಸ್ತೆ ಅಪಘಾತಕ್ಕೆ ಭಾರತೀಯ ವಿದ್ಯಾರ್ಥಿನಿ ಮೃತ್ಯು
ದುಬೈ: ಕಾರಿನ ಟೈರ್ ಪಂಕ್ಚರ್ ಆಗಿ ರಸ್ತೆಬದಿಯಲ್ಲಿ ನಿಂತು ಸಹಾಯಕ್ಕಾಗಿ ಫೋನ್ ಮಾಡುತ್ತಿದ್ದ 21 ವರ್ಷದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟ ಭೀಕರ ಘಟನೆ ದುಬೈನ ರಶೀದಿಯಾ ಪ್ರದೇಶದಲ್ಲಿ ಸಂಭವಿಸಿದೆ.
ಕೇರಳದ ತೋಡುಪುಳ ಮೂಲದ ನೈಫಾ ಬಾಲ್ಕೀಸ್ ಮೃತ ದುರ್ದೈವಿ. ಈಕೆ ದುಬೈನ ಕೆನಡಿಯನ್ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ವಾಸ್ತುಶಿಲ್ಪ (ಆರ್ಕಿಟೆಕ್ಚರ್) ವ್ಯಾಸಂಗ ಮಾಡುತ್ತಿದ್ದರು. ಮಧ್ಯಾಹ್ನ ಸುಮಾರು 3 ಗಂಟೆಗೆ ನೈಫಾ ಕಾರು ಚಾಲನೆ ಮಾಡುತ್ತಿದ್ದಾಗ ರಶೀದಿಯಾ ಬಳಿ ಕಾರಿನ ಟೈರ್ ಪಂಕ್ಚರ್ ಆಗಿದೆ. ತಕ್ಷಣ ರಸ್ತೆಬದಿಗೆ ವಾಹನ ನಿಲ್ಲಿಸಿದ ಆಕೆ, ಕೇರಳದಲ್ಲಿದ್ದ ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಕೆಯ ತಂದೆ ಬಿನು ಹಮೀದ್, ತಕ್ಷಣ ರಸ್ತೆಬದಿಯ ರಿಕವರಿ ಸೇವೆಯ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯುವಂತೆ ಸಲಹೆ ನೀಡಿದ್ದರು.
ತಂದೆಯ ಮಾತಿನಂತೆ ಕಾರಿನಿಂದ ಕೆಳಗಿಳಿದು ರಿಕವರಿ ಸೇವೆಗೆ ಫೋನ್ ಮಾಡುತ್ತಿದ್ದ ವೇಳೆ, ಎದುರಿನಿಂದ ವೇಗವಾಗಿ ಬಂದ ವಾಹನವೊಂದು ನೈಫಾಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಸ್ವಲ್ಪ ಸಮಯದ ನಂತರ ಮಗಳ ಸ್ಥಿತಿಗತಿ ವಿಚಾರಿಸಲು ತಂದೆ ಮತ್ತೆ ಕರೆ ಮಾಡಿದ್ದಾರೆ. ಆದರೆ, ಕರೆಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ. ತದನಂತರ ದುಬೈ ಪೊಲೀಸರು ಕುಟುಂಬಸ್ಥರನ್ನು ಸಂಪರ್ಕಿಸಿ ನೈಫಾ ಮೃತಪಟ್ಟಿರುವ ದಾರುಣ ಸುದ್ದಿಯನ್ನು ತಿಳಿಸಿದ್ದಾರೆ. ದುಬೈನಲ್ಲಿ ಉದ್ಯಮಿಯಾಗಿರುವ ತಂದೆ ಬಿನು ಹಮೀದ್ ಹಾಗೂ ತಾಯಿ ಸೀನಾ ಬೆಳಗಿನ ವಿಮಾನದ ಮೂಲಕ ದುಬೈಗೆ ತಲುಪಿದ್ದಾರೆ. ಮೃತದೇಹವನ್ನು ಪ್ರಸ್ತುತ ದುಬೈ ಪೊಲೀಸ್ ವಿಧಿವಿಜ್ಞಾನ ಇಲಾಖೆಯಲ್ಲಿ ಇರಿಸಲಾಗಿದ್ದು, ಕೇರಳಕ್ಕೆ ತರಲು ಕಾನೂನು ಪ್ರಕ್ರಿಯೆಗಳು ಪ್ರಗತಿಯಲ್ಲಿವೆ.




