August 5, 2026

ದುಬೈ: ಜೆಬೆಲ್ ಅಲಿ ಕೈಗಾರಿಕಾ ಪ್ರದೇಶದಲ್ಲಿ ಭೀಕರ ಸ್ಫೋಟ: ಘಟನೆ ದೃಶ್ಯ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಇಬ್ಬರ ಬಂಧನ

0
image_editor_output_image-999791924-1785911968863

ದುಬೈ: ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಉದ್ವಿಗ್ನತೆ ತೀವ್ರಗೊಂಡಿರುವ ಬೆನ್ನಲ್ಲೇ, ಯುಎಇಯ ದುಬೈನಲ್ಲಿರುವ ಪ್ರಸಿದ್ಧ ಜೆಬೆಲ್ ಅಲಿ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಭೀಕರ ಸರಣಿ ಸ್ಫೋಟಗಳು ಸಂಭವಿಸಿವೆ.

ಕೇವಲ 20 ನಿಮಿಷಗಳ ಅಂತರದಲ್ಲಿ ಬರೋಬ್ಬರಿ ಏಳು ಸ್ಫೋಟಗಳು ಸಂಭವಿಸಿದ್ದು, ಕತ್ತಲ ರಾತ್ರಿಯಲ್ಲಿ ಆಕಾಶದ ತುಂಬಾ ದಟ್ಟವಾದ ಕಪ್ಪು ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಸ್ಫೋಟದ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಈ ಘಟನೆಯು ಯಾವುದಾದರೂ ಕ್ಷಿಪಣಿ ಅಥವಾ ಡ್ರೋನ್ ದಾಳಿಯಿಂದ ಸಂಭವಿಸಿದೆಯೇ ಅಥವಾ ಕೈಗಾರಿಕಾ ಪ್ರದೇಶದಲ್ಲಿ ನಡೆದ ಆಕಸ್ಮಿಕ ಅಪಘಾತವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಮೆರಿಕ-ಇರಾನ್ ಸಮರದ ನಡುವೆ ಯೆಮೆನ್‌ನಿಂದ ಯುಎಇಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾಕಿ ಮಾಧ್ಯಮಗಳು ಪ್ರತಿಪಾದಿಸಿವೆಯಾದರೂ, ಯುಎಇ ಸರ್ಕಾರಿ ಮಾಧ್ಯಮಗಳು ಈ ಬಗ್ಗೆ ಯಾವುದೇ ಅಧಿಕೃತ ವಿವರಣೆಯನ್ನು ನೀಡಿಲ್ಲ.

ಇನ್ನೊಂದೆಡೆ, ನಾಸಾದ ಉಪಗ್ರಹ ಉಷ್ಣ ಚಿತ್ರಣ (ಥರ್ಮಲ್ ಇಮೇಜರಿ) ವಿಶ್ಲೇಷಣೆಯ ಪ್ರಕಾರ, ಬಂದರಿನ ಪಕ್ಕದಲ್ಲಿದ್ದ ಇಂಧನ ಸಂಗ್ರಹಣೆ ಮತ್ತು ರವಾನೆ ಗೋದಾಮಿನಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿರುವುದು ಕಂಡುಬಂದಿದೆ. ಘಟನೆಯಲ್ಲಿ ಆಗಿರುವ ಆಸ್ತಿಪಾಸ್ತಿ ನಷ್ಟ ಅಥವಾ ಸಾವುನೋವುಗಳ ಕುರಿತು ಸದ್ಯಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸ್ಫೋಟದ ತೀವ್ರತೆಗೆ ಸಮೀಪದ ‘ಅಲ್ ಫುರ್ಜಾನ್’ ವಸತಿ ಪ್ರದೇಶದ ನಿವಾಸಿಗಳಿಗೆ ಭಾರಿ ಸದ್ದು ಕೇಳಿಸಿದ್ದು, ಜನ ಬೆಚ್ಚಿಬಿದ್ದಿದ್ದಾರೆ.

ದುಬೈ ನಗರ ಕೇಂದ್ರದಿಂದ ನೈಋತ್ಯಕ್ಕೆ ಸುಮಾರು 25 ಮೈಲಿ ದೂರದಲ್ಲಿರುವ ಜೆಬೆಲ್ ಅಲಿ ಪ್ರದೇಶವು ಯುಎಇಯ ಅತ್ಯಂತ ಪ್ರಮುಖ ವ್ಯಾಪಾರ ಹಾಗೂ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿ ಪ್ರಸಿದ್ಧ ಪಾಮ್ ಜೆಬೆಲ್ ಅಲಿ ದ್ವೀಪ ಹಾಗೂ ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಬಂದರಿದ್ದು, ಜಾಗತಿಕ ಹಡಗು ಸಾರಿಗೆಯ ಪ್ರಮುಖ ಮಾರ್ಗವಾಗಿದೆ. ಅಮೆರಿಕದ ಮಿತ್ರ ರಾಷ್ಟ್ರವಾಗಿರುವ ಯುಎಇ ಮೇಲೆ ಇರಾನ್ ಅಥವಾ ಅದರ ಬೆಂಬಲಿತ ಗುಂಪುಗಳು ದಾಳಿ ನಡೆಸುವ ಸಾಧ್ಯತೆಯಿರುವುದರಿಂದ ಇಡೀ ದೇಶದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿತ್ತು. ಇದರ ನಡುವೆಯೇ ಈ ಸರಣಿ ಸ್ಫೋಟ ಸಂಭವಿಸಿರುವುದು ವಲಯದಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!