November 7, 2026

ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ – ಕನ್ನಡ ಡಿಂಡಿಮ 2026

0
image_editor_output_image-205671246-1794016540405

ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್, ಕಂಬಳಬೆಟ್ಟು, ವಿಟ್ಲ ಇಲ್ಲಿ ನವೆಂಬರ್ 5, 2026ರ ಗುರುವಾರದಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ “ಕನ್ನಡ ಡಿಂಡಿಮ – 2026” ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮವು ಶಾಲೆಯ ನಿರ್ದೇಶಕರಾದ ಶ್ರೀ ನೌಶೀನ್ ಬದ್ರಿಯಾ, ಪ್ರಾಂಶುಪಾಲರಾದ ಶ್ರೀ ಲಿಬಿನ್ ಕ್ಸೇವಿಯರ್ ಹಾಗೂ ಆಡಳಿತಾಧಿಕಾರಿಯಾದ ಶ್ರೀ ಸಫ್ವಾನ್ ಪಿಲಿಕಲ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಆಡಳಿತಾಧಿಕಾರಿ ಶ್ರೀ ಸಫ್ವಾನ್ ಪಿಲಿಕಲ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕನ್ನಡ ಭಾಷೆಯ ಮಹತ್ವ, ಕನ್ನಡ ನಾಡು-ನುಡಿಯ ವೈಭವ ಹಾಗೂ ಕನ್ನಡದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಸಂದೇಶ ನೀಡಿದರು. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು, ದೈನಂದಿನ ಜೀವನದಲ್ಲಿ ಕನ್ನಡವನ್ನು ಗೌರವಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಕನ್ನಡ ನಾಡಿನ ಹೋರಾಟಗಾರರು, ಕನ್ನಡದ ಮಹಾನ್ ಕವಿಗಳು ಹಾಗೂ ಪ್ರಸಿದ್ಧ ವ್ಯಕ್ತಿಗಳ ವೇಷಭೂಷಣ ಧರಿಸಿ ನಡೆಸಿದ ಛದ್ಮವೇಷ ಪ್ರದರ್ಶನವು ಗಮನ ಸೆಳೆಯಿತು. ಕನ್ನಡ ಕವಿತೆಗಳ ವಾಚನ, ಕನ್ನಡ ಗೀತೆಗಳ ಗಾಯನ, ಮನಮೋಹಕ ನೃತ್ಯಗಳು ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹಾಗೂ ಕಲಾತ್ಮಕ ಪ್ರದರ್ಶನಗಳ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದರು. ಇಡೀ ಕಾರ್ಯಕ್ರಮವು ಕನ್ನಡ ನಾಡು-ನುಡಿಯ ಮೇಲಿನ ಅಭಿಮಾನ ಮತ್ತು ಗೌರವವನ್ನು ಮತ್ತಷ್ಟು ಹೆಚ್ಚಿಸುವುದರೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *

error: Content is protected !!