November 7, 2026

ಸುಬ್ರಹ್ಮಣ್ಯ: ಗೆಳತಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನ: ಪ್ರಿಯಕರನ ಬಂಧನ

0
image_editor_output_image1467488000-1793992956587

ಸುಬ್ರಹ್ಮಣ್ಯ: ಪ್ರೇಮ ಸಂಬಂಧ ಹಾಗೂ ಗರ್ಭಧಾರಣೆಯ ಹಿನ್ನೆಲೆಯಲ್ಲಿ ಯುವತಿಯೊಬ್ಬಳನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಕೊಲೆಗೆ ಯತ್ನಿಸಿ, ಚರಂಡಿಗೆ ಎಸೆದು ಪರಾರಿಯಾಗಿದ್ದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಡಬ ತಾಲ್ಲೂಕಿನ ಕೊಣಾಜೆ ಮೂಲದ ಪ್ರಸಾದ್ ಬಂಧಿತ ಆರೋಪಿ.

ಕೊಂಬಾರು ಮೂಲದ ಯುವತಿ ಹಾಗೂ ಕೊಣಾಜೆಯ ಪ್ರಸಾದ್ ನಡುವೆ ಪ್ರೇಮ ಸಂಬಂಧವಿತ್ತು. ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ಇತ್ತ ಆರೋಪಿ ಪ್ರಸಾದ್‌ಗೆ ಬೇರೆಡೆಯಿಂದ ಮದುವೆ ನಿಶ್ಚಯವಾಗಿತ್ತು. ಈ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಬುಧವಾರ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದ ಪ್ರಸಾದ್, ಅಲ್ಲಿ ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಯುವತಿ ಪ್ರಜ್ಞೆ ತಪ್ಪಿ ಬಿದ್ದಾಗ ಆಕೆ ಮೃತಪಟ್ಟಿದ್ದಾಳೆ ಎಂದು ಬಾವಿಸಿ, ಘಾಟಿಯ ರಸ್ತೆಬದಿಯ ಚರಂಡಿಗೆ ಎಸೆದು ಸ್ಥಳದಿಂದ ಕಾಲ್ಕಿತ್ತಿದ್ದ.

ರಾತ್ರಿಯಿಡೀ ನಿರ್ಜನ ಕಾಡಿನ ನಡುವಿನ ಚರಂಡಿಯಲ್ಲೇ ಕಾಲ ಕಳೆದ ಯುವತಿ, ಗುರುವಾರ ಬೆಳಿಗ್ಗೆ ಧೈರ್ಯ ತಳೆದು ರಸ್ತೆಗೆ ಬಂದು ಕೆಎಸ್ಆರ್‌ಟಿಸಿ ಬಸ್ ಮೂಲಕ ಸುಬ್ರಹ್ಮಣ್ಯ ತಲುಪಿದ್ದಾರೆ.

ನೇರವಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ಘಟನೆ ಕುರಿತು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಸುಬ್ರಹ್ಮಣ್ಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ನವೆಂಬರ್ 5ರಂದು ಆರೋಪಿ ಪ್ರಸಾದ್ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!