ಮನೆಯಲ್ಲಿಟ್ಟಿದ್ದ ಕೆಮ್ಮಿನ ಸಿರಪ್ ಕುಡಿದು 4 ವರ್ಷದ ಮಗು ಮೃತ್ಯು
ಲಕ್ನೋ: ಉತ್ತರ ಪ್ರದೇಶದಲ್ಲಿ ಅತ್ಯಂತ ದಾರುಣ ಘಟನೆಯೊಂದು ನಡೆದಿದ್ದು, ಇಡೀ ಬಾಟಲಿ ಕೆಮ್ಮಿನ ಸಿರಪ್ ಸೇವಿಸಿದ 4 ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮನೆಯಲ್ಲಿ ಪೋಷಕರ ಕಣ್ಣು ತಪ್ಪಿಸಿ ಮಗು ಕೆಮ್ಮಿನ ಸಿರಪ್ ಕುಡಿದಿದ್ದು, ಕುಟುಂಬಸ್ಥರಲ್ಲಿ ಶೋಕ ಉಂಟಾಗಿದೆ.
ಮನೆಯಲ್ಲಿಟ್ಟಿದ್ದ ಕೆಮ್ಮಿನ ಸಿರಪ್ ಬಾಟಲಿ ಜೊತೆ ಆಟವಾಡುತ್ತಿದ್ದ ಮಗು ಪೋಷಕರು ಬೇರೆ ಕೆಲಸದಲ್ಲಿದ್ದಾಗ ಆ ಬಾಟಲಿಯಲ್ಲಿದ್ದ ಪೂರ್ತಿ ಸಿರಪ್ ಅನ್ನು ಕುಡಿದಿದೆ. ಸ್ವಲ್ಪ ಸಮಯದ ನಂತರ ಮಗು ಅತಿಯಾದ ತೂಕಡಿಕೆ ಮತ್ತು ಅಸ್ವಸ್ಥತೆಗೆ ಒಳಗಾದಾಗ ಪೋಷಕರು ಗಾಬರಿಯಾಗಿದ್ದಾರೆ. ಮಗುವಿನ ಸ್ಥಿತಿ ಹದಗೆಡುತ್ತಿದ್ದಂತೆ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಗ ವೈದ್ಯರು ಸಿರಪ್‌ನಲ್ಲಿರುವ ರಾಸಾಯನಿಕಗಳ ಅತಿಯಾದ ಪ್ರಮಾಣವನ್ನು ಹೊರತೆಗೆಯಲು ಮತ್ತು ಮಗುವನ್ನು ರಕ್ಷಿಸಲು ತೀವ್ರ ಯತ್ನ ನಡೆಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮಗು ಕೊನೆಯುಸಿರೆಳೆಯಿತು.
ನವೆಂಬರ್ 5ರಂದು ನಡೆಯಲಿದ್ದ ನಾಮಕರಣ ಸಮಾರಂಭದಲ್ಲಿ ಪಾಲ್ಗೊಳ್ಳಲು, ಬಾಲಕಿಯು ತನ್ನ ತಾಯಿ ರೆಹಾನಾ ಮತ್ತು ಅಜ್ಜಿ ಶಬೀನಾ ಬೇಗಂ ಅವರೊಂದಿಗೆ ಆ ಗ್ರಾಮಕ್ಕೆ ತೆರಳಿದ್ದಳು. ಕುಟುಂಬ ಸದಸ್ಯರ ಪ್ರಕಾರ, 70 ವರ್ಷದ ಸಂಬಂಧಿಕರೊಬ್ಬರು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದರು. ಅವರು ಬುಧವಾರ ಸಂಜೆ ತಮ್ಮ ಕೋಣೆಯಲ್ಲಿದ್ದ ಬಾಟಲಿಯಿಂದ ಸಿರಪ್ ಸೇವಿಸಿದ್ದರು. ಆ ಬಾಟಲಿಯನ್ನು ಅಲ್ಲೇ ಇಡಲಾಗಿತ್ತು. ಮಾರನೇ ದಿನ ಮಗು ಆಟವಾಡುತ್ತಾ ಆ ಬಾಟಲಿ ತೆಗೆದು ನೆಕ್ಕಿದಾಗ ಸಿಹಿಯಾದ ರುಚಿ ಇಷ್ಟವಾಗಿ ಇಡೀ ಬಾಟಲಿ ಖಾಲಿ ಮಾಡಿದೆ.




