ರೆಬೀಸ್ ಕಾಯಿಲೆಗೆ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಮೃತ್ಯು
ಲಕ್ಷ್ಮೀ: ರೇಬಿಸ್ ಕಾಯಿಲೆಗೆ ತುತ್ತಾಗಿ ರಾಜ್ಯ ಮಟ್ಟದ ಕಬಡ್ಡಿ ಆಟಗಾರನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.
ಬ್ರಿಜೇಶ್ ಸೋಲಂಕಿ ಮೃತ ಕಬಡ್ಡಿ ಆಟಗಾರ.ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ಫರಾನಾ ಗ್ರಾಮದ ನಿವಾಸಿಯಾಗಿದ್ದ ಬ್ರಿಜೇಶ್ ಈ ವರ್ಷದ ಮಾರ್ಚ್ ತಿಂಗಳ ಆರಂಭದಲ್ಲಿ ಚರಂಡಿಗೆ ಬಿದ್ದಿದ್ದ ನಾಯಿಮರಿಯೊಂದನ್ನು ರಕ್ಷಣೆ ಮಾಡಿದ್ದರು. ರಕ್ಷಣೆ ಮಾಡುವ ಸಂದರ್ಭದಲ್ಲಿ ನಾಯಿಮರಿ ಬ್ರಿಜೇಶ್ ಅವರಿಗೆ ಕಚ್ಚಿತ್ತು. ಪರಿಣಾಮ ಅವರಿಗೆ ಗಾಯವಾಗಿತ್ತು.
ನಾಯಿಮರಿ ಕಚ್ಚಿದ್ದ ಗಾಯವನ್ನು ಬ್ರಿಜೇಶ್ ಅವರು ಸಣ್ಣಪುಟ್ಟ ಗಾಯವೆಂದುಕೊಂಡು ರೇಬಿಸ್ ಲಸಿಕೆಯನ್ನು ಪಡೆದಿರಲಿಲ್ಲ. ದಿನ ಕಳೆಯುತ್ತಿದ್ದಂತೆ ಬ್ರಿಜೇಶ್‌ಗೆ ತೋಳು ನೋವು ಶುರುವಾಗಿದೆ. ಇದು ಕಬಡ್ಡಿ ಆಟದ ಸಾಮಾನ್ಯ ನೋವೆಂದು ಬ್ರಿಜೇಶ್ ನಿತ್ಯದ ಅಭ್ಯಾಸ ಮುಂದುವರೆಸುತ್ತಿದ್ದರು.





