ಬಂಟ್ವಾಳ: ಕುಕ್ಕಾಜೆ ಮಸೀದಿಯ ಅಧಿಕಾರ ಹಸ್ತಾಂತರ ಆದೇಶ ರದ್ದತಿಗೆ ಮನವಿ
ಬಂಟ್ವಾಳ: ಕುಕ್ಕಾಜೆಯ ಮುಹಿಯುದ್ದೀನ್ ಜುಮಾ ಮಸೀದಿಯ ಚುನಾವಣೆಯ ತಕರಾರು ಅರ್ಜಿ ಇತ್ಯರ್ಥಗೊಂಡಿಲ್ಲ. ವಕ್ಫ್ ಅಧಿನಿಯಮದಂತೆ ರಾಜ್ಯ ವಕ್ಫ್ ಮಂಡಳಿಯು ಆಡಳಿತ ಸಮಿತಿಯನ್ನು ಅಂಗೀಕರಿಸದೆ ಮಸೀದಿಯ ಅಧಿಕಾರದ ಆಡಳಿತವನ್ನು ಆಡಳಿತಾಧಿಕಾರಿಗಳು ಹಸ್ತಾಂತರಿಸಿದ ಆದೇಶವನ್ನು ರದ್ದುಪಡಿಸಿ ಕಾನೂನುಬದ್ಧವಾಗಿ ವಕ್ಫ್ ಇಲಾಖೆಯಿಂದಲೇ ಮಸೀದಿಯ ಆಡಳಿತವನ್ನು ನಿರ್ವಹಿಸಬೇಕು ಎಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದ 11 ಅಭ್ಯರ್ಥಿಗಳು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈ ಮಸೀದಿಯ ಆಡಳಿತ ಸಮಿತಿಗೆ 2025ರ ಜನವರಿ 25ರಂದು ಚುನಾವಣೆ ನಡೆದಿದ್ದು, ಇದರ ಫಲಿತಾಂಶವನ್ನು ಪ್ರಕಟಿಸದಂತೆ ಹೈಕೋರ್ಟ್ ಆದೇಶಿಸಿತ್ತು. ಬಳಿಕ ವಿಚಾರಣೆ ನಡೆಸಿ ಫಲಿತಾಂಶ ಪ್ರಕಟಿಸಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಚುನಾವಣಾಧಿಕಾರಿಗಳು 2026ರ ಮಾ.10ರಂದು ಫಲಿತಾಂಶದ ಪ್ರಕ್ರಿಯೆ ನಡೆಸಿದ್ದಾರೆ. ಈ ಮಧ್ಯೆ ಮಸೀದಿಯ ಆಡಳಿತಾಧಿಕಾರಿ ಹೈಕೋರ್ಟ್ ಆದೇಶಕ್ಕೆ ವಿರುದ್ದವಾಗಿ ಮಾ.11ರಂದು ಮಸೀದಿಯ ಕಚೇರಿಯಲ್ಲಿ ದಿಢೀರ್ ಆಗಿ ಅಧಿಕಾರ ಹಸ್ತಾಂತರಿಸಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟನೆ ನೀಡಿರುವುದು ಸಂಶಯಗಳಿಗೆ ಕಾರಣವಾಗಿದೆ. ಹಾಗಾಗಿ ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಅಧಿಕಾರ ಹಸ್ತಾಂತರ ಮಾಡಿರುವುದನ್ನು ರದ್ದುಪಡಿಸಬೇಕು ಮತ್ತು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಾದ ಮುಹಮ್ಮದ್ ಸಮೀವುಲ್ಲಾ, ಅಬೂಬಕರ್ ಮುಸ್ಲಿಯಾರ್, ಅಬ್ದುಲ್ ಬಶೀರ್, ಕೆ.ಅಬ್ದುಲ್ ರಝಾಕ್, ಅಬ್ದುಲ್ ಸಲಾಂ, ಅಬ್ಬಾಸ್, ಡಿ. ಮೊಯ್ದು ಕುಂಞ, ಇಬ್ರಾಹೀಂ ಬಾತಿಷ್, ಇಸ್ಮಾಯೀಲ್, ಕೆ.ಯು. ಇಬ್ರಾಹೀಂ ಮದನಿ, ಎಂ. ಮುಹಮ್ಮದ್ ಎಂಬವರು ಹೈಕೋರ್ಟ್‌ನಲ್ಲಿ ರಿರ್ಟ್ ಅರ್ಜಿ ಸಲ್ಲಿಸಿದ್ದಾರೆ.
ಕುಕ್ಕಾಜೆ ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿಗೆ ಸಂಬಂಧಿಸಿ ಶುಕ್ರವಾರ ಪ್ರಕಟವಾದ ವರದಿ ಸತ್ಯಕ್ಕೆ ದೂರವಾಗಿದೆ. ಚಲಾವಣೆಯಾದ ಮತಗಳು 800ಕ್ಕಿಂತ ಸ್ವಲ್ಪ ಹೆಚ್ಚು ಇದ್ದು, 500ಕ್ಕೂ ಅಧಿಕ ಮತದ ಅಂತರವೂ ಸುಳ್ಳಾಗಿದೆ. ಮುಂದೆ ಕಾನೂನು ಹೋರಾಟ ಮುಂದುವರಿಸುವುದಾಗಿ ಎಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.




