ಅಹಮದಾಬಾದ್ ಏರ್ ಇಂಡಿಯಾ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆ: ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿ
ನವದೆಹಲಿ: ಗುಜರಾತ್ನ ಅಹಮದಾಬಾದ್ನಲ್ಲಿ ಇತ್ತೀಚೆಗೆ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಅವರ ಸಹೋದರನ ಅಂತ್ಯಸಂಸ್ಕಾರ ನೆರವೇರಿಸಬೇಕಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಏಪ್ರಿಲ್ 12ರಂದು ಲಂಡನ್ಗೆ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮತ್ತು ಕ್ಯಾಂಟೀನ್ಗೆ ಡಿಕ್ಕಿ ಹೊಡೆದಿತ್ತು.
ಅದರಲ್ಲಿದ್ದ 242 ಮಂದಿ ಪೈಕಿ ಕೇವಲ ಒಬ್ಬರು ಮಾತ್ರ ಬದುಕುಳಿದಿದ್ದರು ಅವರೇ ರಮೇಶ್. ಆದರೆ ದುರಾದೃಷ್ಟವಶಾತ್ ಜತೆಯಲ್ಲಿದ್ದ ಸಹೋದರ ಪ್ರಾಣಬಿಟ್ಟಿದ್ದರು. ಅವರ ಅಂತ್ಯಕ್ರಿಯೆ ನಡೆಸಬೇಕಾದ ಕಾರಣ ಹೋಗುತ್ತಿದ್ದೇನೆ ಎಂದು ರಮೇಶ್ ತಿಳಿಸಿದ್ದಾರೆ.
ವಿಮಾನದಲ್ಲಿ ರಮೇಶ್ ತುರ್ತು ನಿರ್ಗಮನ ದ್ವಾರದ ಪಕ್ಕದಲ್ಲಿ 11A ನಲ್ಲಿ ಕುಳಿತಿದ್ದರು. ಅಪಘಾತದ ಸಂದರ್ಭದಲ್ಲಿ ಅವರ ಸೀಟು ಬೇರ್ಪಟ್ಟು ದೂರ ಹಾರಿತ್ತು. ಹೀಗಾಗಿ ಬೆಂಕಿಯಿಂದ ಪಾರಾಗಿದ್ದರು. ಸೀಟಿನ ಸಮೇತ ಕೆಳಗೆ ಹಾರಿದ್ದರು. ವಿಮಾನ ತುಂಡಾಗಿ ಸೀಟು ಕೂಡ ಕಳಚಿಬಂದಿತ್ತು ಎಂದು ವೈದ್ಯರಿಗೆ ರಮೇಶ್ ತಿಳಿಸಿದ್ದರು.
ತಾನು ಇಳಿದ ಸ್ಥಳ ತಗ್ಗಾಗಿತ್ತು, ಸೀಟ್ ಬೆಲ್ಟ್ ತೆಗೆದೆ ಒಂದು ಕ್ಷಣ ಮೈಯೆಲ್ಲಾ ಕಂಪಿಸಿತ್ತು, ಆದರೆ ನಾನು ಭೂಮಿಗೆ ತುಂಬಾ ಹತ್ತಿರವಾಗಿದ್ದೆ, ಹಾಗಾಗಿ ಹೊರಬರಲು ಪ್ರಯತ್ನಿಸಿದೆ ಎಂದು ತಿಳಿಸಿದ್ದಾರೆ. ವಿಮಾನ ಅಪಘಾತದ ಸ್ವಲ್ಪ ಸಮಯದ ನಂತರ ಅವರು ಬಿಜೆ ವೈದ್ಯಕೀಯ ಕ್ಯಾಂಪಸ್‌ನಿಂದ ಹೊರಬರುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.





