ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ಕಾರು ಹರಿದು 7 ಜನರು ಮೃತ್ಯು
ಬ್ರೌನ್ಸ್‌ವಿಲ್ಲೆ: ಟೆಕ್ಸಾಸ್‌ನ ಗಡಿ ನಗರ ಬ್ರೌನ್ಸ್‌ವಿಲ್ಲೆಯಲ್ಲಿ ನಿನ್ನೆ ಕಾರು ಅಪಘಾತ ಸಂಭವಿಸಿದ್ದು, 7 ಜನರು ಅಸುನೀಗಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ವಲಸಿಗರ ಆಶ್ರಯತಾಣದ ಹೊರಗೆ ಬಸ್ಸಿಗಾಗಿ ಗಕಾಯುತ್ತಿದ್ದ ಜನರಿಗೆ ಕಾರು ಬಂದು ಡಿಕ್ಕಿ ಹೊಡೆದಿತ್ತು.
ಅಪಘಾತ ಬೆಳಗ್ಗೆ 8.30ಕ್ಕೆ ಸಂಭವಿಸಿದ್ದು SUV ಕಾರು ರಸ್ತೆ ತಡೆಬೇಲಿ ಮೇಲೆ ಚಲಿಸಿ ಪಲ್ಟಿಯಾಗಿದೆ. ಬಳಿಕ 60 ಮೀಟರ್ ದೂರ ಚಲಿಸಿದೆ. ರಸ್ತೆ ತಡೆ ಮೇಲೆ ಕುಳಿತಿದ್ದ ಜನರಿಗೆ ಗುದ್ದಿದ್ದಲ್ಲದೆ, ಅಲ್ಲಿಂದ 9 ಮೀಟರ್ ಮುಂದೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರಿಗೂ ಡಿಕ್ಕಿ ಹೊಡೆದಿದೆ. ಆರೋಪಿ ಚಾಲಕ ಘಟನೆಯ ನಂತರ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಪ್ರತ್ಯಕ್ಷದರ್ಶಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಪಘಾತಕ್ಕೆ ಒಳಗಾದ ಜನರೆಲ್ಲರೂ ವಲಸಿಗರ ಆಶ್ರಯದಲ್ಲಿ ರಾತ್ರಿ ತಂಗಿದ್ದು, ಬೆಳಗ್ಗೆ ಡೌನ್‌ಟೌನ್ ಬ್ರೌನ್ಸ್‌ವಿಲ್ಲೆಗೆ ಹಿಂದಿರುಗಲು ಬಸ್ಸಿಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಇವರ ಮೇಲೆ ಹರಿಯಿತು ಎಂದು ರಿಯೊ ಗ್ರಾಂಡೆ ವ್ಯಾಲಿಯ ಕ್ಯಾಥೊಲಿಕ್ ಚಾರಿಟೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಿಸ್ಟರ್ ನಾರ್ಮಾ ಪಿಮೆಂಟೆಲ್ ತಿಳಿಸಿದರು.
ಆರೋಪಿಯನ್ನು ತಮ್ಮ ವಶಕ್ಕೆ ಪಡೆದಿರುವ ಪೊಲೀಸರು ಆತನಿಗೂ ಗಾಯಗಳಾಗಿರುವುದರಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಚಿಕಿತ್ಸೆ ಪಡೆದು ಬಿಡುಗಡೆಯಾದ ಕೂಡಲೇ ನಗರದ ಜೈಲಿಗೆ ಕರೆದೊಯ್ಯಲಾಗುವುದು. ಫಿಂಗರ್ ಪ್ರಿಂಟ್ ಮತ್ತು ರಕ್ತದ ಮಾದರಿಯನ್ನು ಟೆಕ್ಸಾಸ್ ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಸೇಫ್ಟಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಕಾರಿನಲ್ಲಿ ಆರೋಪಿ ಚಾಲಕ ಬಿಟ್ಟರೆ ಬೇರೆ ಯಾರು ಇರಲಿಲ್ಲ. ಮಾದಕ ವಸ್ತು ಸೇವನೆ, ಸಹಜ ಅಪಘಾತ ಹಾಗು ಉದ್ದೇಶಪೂರ್ವಕ ಕೃತ್ಯವೇ ಎಂಬೆಲ್ಲ ಆಯಾಮಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ತನಿಖಾಧಿಕಾರಿ ಮಾರ್ಟಿನ್ ಸ್ಯಾಂಡೋವಲ್ ಹೇಳಿದರು.




