ಮಕಾಡೆ ಮಲಗಿದ ಮಂಗಳೂರು ಎಂಬಾರ್ಕೇಶನ್ ಸೆಂಟರ್: ಹಜ್ ಸಮಿತಿಯ ಮಲತಾಯಿ ಧೋರಣೆಗೆ ವ್ಯಾಪಕ ಆಕ್ರೋಶ
-ರಶೀದ್ ವಿಟ್ಲ
ಕೇಂದ್ರ ಹಜ್ ಕಮಿಟಿಯು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಶಿವಮೊಗ್ಗ ಜಿಲ್ಲೆಯ ಸಹಸ್ರಾರು ಹಜ್ ಯಾತ್ರಾರ್ಥಿಗಳಿಗೆ ಮೋಸ ಮಾಡಿದೆ.
ಇದರ ವಿರುದ್ಧ ಯಾತ್ರಿಕರು ಕಾನೂನು ಕ್ರಮಕ್ಕೆ ಮುಂದಾಗಬೇಕು. 2023 ರ ಹಜ್ ಯಾತ್ರೆಗೆ ಹಜ್ ಸಮಿತಿಯು ಅರ್ಜಿ ಆಹ್ವಾನಿಸಿತ್ತು. ಆವಾಗ ಮಂಗಳೂರು ಎಂಬಾರ್ಕೇಶನ್ ಸೆಂಟರಿಂದ ಹೋಗುವ ಭರವಸೆ ನೀಡಿತ್ತು. ಆದರೆ ಎರಡು ಬಾರಿ ಅಡ್ವಾನ್ಸ್ ಮೊತ್ತ (2,51,800/-) ಪಾವತಿಸಿದ ಬಳಿಕ ಮಂಗಳೂರು ಸೆಂಟರ್ ರದ್ದುಗೊಳಿಸಿ ಬೆಂಗಳೂರು ಅಥವಾ ಕೇರಳದ ಕಣ್ಣೂರಿಂದ ಹೋಗಿ ಎಂದು ತೇಪೆ ಹಚ್ಚುವ ಕಾರ್ಯ ಮಾಡಿದೆ. ಇದು ಅಕ್ಷಮ್ಯ ಅಪರಾಧ ಎಂದು ಅರ್ಜಿ ಸಲ್ಲಿಸಿರುವ ಯಾತ್ರಾರ್ಥಿಕರು ಕೇಂದ್ರ ಹಜ್ ಸಮಿತಿಯ ಧೋರಣೆಗೆ ಕಿಡಿಕಾರಿದ್ದಾರೆ.
ಕೇರಳ ಸಣ್ಣ ರಾಜ್ಯವಾದರೂ ಅಲ್ಲಿ ಕ್ಯಾಲಿಕಟ್, ಕೊಚಿನ್ ಅಂತ ಎರಡು ಹಜ್ ಎಂಬಾರ್ಕೇಶನ್ ಸೆಂಟರ್ ಇತ್ತು. ಇದೀಗ ಕಣ್ಣೂರನ್ನು ಹೊಸದಾಗಿ ಸೇರ್ಪಡೆ ಮಾಡಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ಇರುವುದು ಬೆಂಗಳೂರು ಮಾತ್ರ. ಕ್ಯಾಲಿಕಟ್ ನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಇರುವುದು ಕೇವಲ 120 ಕಿ.ಮೀ. ಮಂಗಳೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ 400 ಕಿ.ಮೀ. ಇದೆ. ಅತೀ ಅಗತ್ಯ ಬೇಕಿದ್ದ ಮಂಗಳೂರು ಎಂಬಾರ್ಕೇಶನ್ ಸೆಂಟರನ್ನು ಮಕಾಡೆ ಮಲಗಿಸಿದ ಹಜ್ ಸಮಿತಿಯ ಮಲತಾಯಿ ಧೋರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇದರ ಹಿಂದೆ ರಾಜಕೀಯ ಕೈವಾಡ ಎದ್ದು ಕಾಣುತ್ತಿದೆ. ಕೇಂದ್ರ ಹಜ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ಲ ಕುಟ್ಟಿಯ ಊರು ಕೇರಳದ ಕಣ್ಣೂರು. ಅವರು ಮಂಗಳೂರಲ್ಲೂ ವಾಸಿಸುತ್ತಿದ್ದಾರೆ. ತನ್ನ ತಾಯ್ನಾಡಿಗಾಗಿ ಮಂಗಳೂರು ಸೆಂಟರನ್ನು ಬಲಿ ಕೊಟ್ಟರೇ ಎಂಬ ಅನುಮಾನ ಸಹಜವಾಗಿ ಕೆಲವರಿಗೆ ಮೂಡಿದೆ.
ಇನ್ನು ಮಂಗಳೂರಿಗರಿಗೆ ಬೆಂಗಳೂರಿಗಿಂತ ಕೇರಳದ ಕಣ್ಣೂರು ಹತ್ತಿರವಾದರೂ ಹಜ್ ಯಾತ್ರಾರ್ಥಿಗಳಿಗೆ 3ನೇ ಕಂತು ಪಾವತಿಸುವ ಮೊತ್ತ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ 2023ರ ಹಜ್ ಯಾತ್ರಿಕರು ಎರಡು ಕಂತುಗಳಲ್ಲಿ ಒಟ್ಟು 2,51,800/- ರೂ. ಪಾವತಿಸಿದ್ದಾರೆ. ಉಳಿದ ಮೊತ್ತ ಪಾವತಿಸಲು ಮೇ 15ರ ಗಡುವು ನೀಡಲಾಗಿದೆ. ಬೆಂಗಳೂರಿಂದ ತೆರಳುವವರು 3ನೇ ಕಂತಿನ ಮೊತ್ತ 52,121/- ಮಾತ್ರ ಪಾವತಿಸಿದರೆ ಸಾಕು. ಆದರೆ ಕಣ್ಣೂರು ಮೂಲಕವಾದರೆ 1,03,706/- ರೂ. ನೀಡಬೇಕು. ಅಂದರೆ ಕಣ್ಣೂರು ಮೂಲಕ ಹೋಗುವವರು 51,585/- ರೂ. ಹೆಚ್ಚುವರಿ ತೆರಬೇಕು. ಇದು ಕರ್ನಾಟಕದ 6 ಜಿಲ್ಲೆಗಳ ಜನರಿಗೆ ಹಜ್ ಸಮಿತಿ ಮಾಡುತ್ತಿರುವ ದ್ರೋಹ. ಇದೇ ರೀತಿಯ ಮೋಸ ಕೇರಳಿಗರಿಗೆ ಆಗುತ್ತಿದ್ದರೆ ಅಲ್ಲಿನ ಹೋರಾಟ, ಪ್ರತಿಭಟನೆಯನ್ನು ಊಹಿಸಿ ನೋಡಿ.
ಬಹು ವರ್ಷಗಳ ಬೇಡಿಕೆಯ ಬಳಿಕ 2009 ರಲ್ಲಿ ಮಂಗಳೂರು ಹಜ್ ಎಂಬಾರ್ಕೇಷನ್ ಸೆಂಟರ್ ಪ್ರಾರಂಭವಾಯಿತು. ಸುತ್ತಮುತ್ತಲ ಆರೇಳು ಜಿಲ್ಲೆಗಳ ಹಜ್ ಯಾತ್ರಿಕರು ಇದರ ಸದುಪಯೋಗ ಪಡೆದರು. ಈಗಾಗಲೇ ಹಜ್ ಸಮಿತಿ ಮೂಲಕ ಒಟ್ಟು ಎಂಟು ಸಾವಿರಕ್ಕೂ ಅಧಿಕ ಹಜ್ ಯಾತ್ರಿಕರು ಮಂಗಳೂರಿಂದ ಸುರಕ್ಷಿತವಾಗಿ ತೆರಳಿದ್ದಾರೆ. ಯಾವುದೇ ಸಮಸ್ಯೆ ಆಗಿಲ್ಲ. ಮಂಗಳೂರಲ್ಲಿ ಹಜ್ ಭವನ ಸ್ಥಾಪನೆಗೆ ಸ್ಥಳ ನಿಗದಿಯೂ ಆಗಿತ್ತು. ಕೊರೋನಾ ಬಳಿಕ 2020 ಹಾಗೂ 2021 ರಲ್ಲಿ ಭಾರತದಿಂದ ಹಜ್ ಗೆ ತೆರಳಲು ಅವಕಾಶವಿರಲಿಲ್ಲ. 2022 ರಲ್ಲಿ ಕರ್ನಾಟಕದಿಂದ ಯಾತ್ರಿಕರ ಸಂಖ್ಯೆ ಕಡಿಮೆ ಇದ್ದುದರಿಂದ ಬೆಂಗಳೂರು ಎಂಬಾರ್ಕೇಶನ್ ಸೆಂಟರ್ ಮಾತ್ರ ಕಾರ್ಯಾಚರಿಸಿತ್ತು. ಆದರೆ ಈ ವರ್ಷ ಹಾಗಲ್ಲ. ಆರೇಳು ಜಿಲ್ಲೆಗಳ ನೂರಾರು ಯಾತ್ರಿಕರು ಮಂಗಳೂರು ವಿಮಾನ ನಿಲ್ದಾಣದ ಬೇಡಿಕೆ ಇಟ್ಟು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೊನೆ ಗಳಿಗೆಯಲ್ಲಿ ನಂಬಿಸಿ ಮೋಸ ಮಾಡಿದೆ. ಬೇಡಿಕೆ ಮತ್ತು ಅಗತ್ಯ ಇಲ್ಲದಿದ್ದರೂ ಕಣ್ಣೂರನ್ನು ಹೊಸದಾಗಿ ಸೇರ್ಪಡೆಗೊಳಿಸಿದ ಹಜ್ ಸಮಿತಿಗೆ ಇನ್ನಾದರೂ ಮಂಗಳೂರಿಗೆ ಅವಕಾಶ ಕಲ್ಪಿಸಲು ಸಾಧ್ಯವಿದೆ ಮತ್ತು ಖಂಡಿತಾ ಪ್ರಯತ್ನಿಸಬಹುದು. ಕೇಂದ್ರ ಸರಕಾರಕ್ಕೆ ಇದೇನು ದೊಡ್ಡ ವಿಷಯವಲ್ಲ. ಇಚ್ಛಾಶಕ್ತಿ ಬೇಕು ಅಷ್ಟೆ.




