ವಯನಾಡ್ ಭೂಕುಸಿತ: ಮತ್ತೊಂದು ಮೃತದೇಹ ಪತ್ತೆ; ಸಾವಿನ ಸಂಖ್ಯೆ 8ಕ್ಕೆ ಏರಿಕೆ
ವಯನಾಡು: ಜಿಲ್ಲೆಯ ಸುರಂಗ ಮಾರ್ಗ ನಿರ್ಮಾಣದ ಯೋಜನಾ ಪ್ರದೇಶದಲ್ಲಿ ಜುಲೈ 7 ರಂದು ಸಂಭವಿಸಿದ್ದ ಭೀಕರ ಭೂಕುಸಿತದ ದುರಂತದಲ್ಲಿ ನಾಪತ್ತೆಯಾಗಿದ್ದ ಕೊನೆಯ ವ್ಯಕ್ತಿಯ ಶವ ಭಾನುವಾರ ಪತ್ತೆಯಾಗಿದೆ. ಇದರೊಂದಿಗೆ ಈ ಭೀಕರ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ದುರ್ದೈವಿಯನ್ನು ಸುರಂಗ ಯೋಜನೆಯ ನಿರ್ಮಾಣ ವ್ಯವಸ್ಥಾಪಕರಾಗಿದ್ದ ವಿಕ್ರಮ್ ರಾಣಾ (58) ಎಂದು ಗುರುತಿಸಲಾಗಿದ್ದು, ಇವರು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಫತೇಪುರ್ ತಾಲೂಕಿನ ಠಾಕೋಲಿ-ಗಿರ್ತಾನ್ ಗ್ರಾಮದ ನಿವಾಸಿಯಾಗಿದ್ದಾರೆ.
ಭಾನುವಾರ ಬೆಳಿಗ್ಗೆ ಮೀನಾಕ್ಷಿ ಸೇತುವೆಯಿಂದ ಸುಮಾರು 350 ಮೀಟರ್ ದೂರದಲ್ಲಿ ಕಬ್ಬಿಣದ ಅವಶೇಷಗಳು ಮತ್ತು ಮಣ್ಣು ಬಿದ್ದಿದ್ದ ಜಾಗದಲ್ಲಿ ಶೋಧ ನಡೆಸುತ್ತಿದ್ದಾಗ ಇವರ ಮೃತದೇಹ ಪತ್ತೆಯಾಗಿದೆ. ರಾಣಾ ಅವರ ಸಂಬಂಧಿಕರು ಶವವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ವೈತಿರಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಆ ಬಳಿಕ ಶವದ ರಕ್ಷಣೆಗಾಗಿ ಕೋಝಿಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ, ನಂತರ ಅವರ ತವರು ಗ್ರಾಮಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.




