ಕೇರಳ: ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ: ಹಲವರು ಸಿಲುಕಿರುವ ಶಂಕೆ, ರಕ್ಷಣಾ ಕಾರ್ಯಾಚಣೆ ಆರಂಭ
ಕೇರಳದ ವಯನಾಡು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಮಂಗಳವಾರ ಭಾರೀ ಭೂಕುಸಿತ ಸಂಭವಿಸಿದೆ. ಇದರ ಪರಿಣಾಮ ಮೇಪ್ಪಾಡಿಯಲ್ಲಿರುವ ನಿರ್ಮಾಣ ಹಂತದ ಸುರಂಗ ರಸ್ತೆ ಯೋಜನೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಹಲವರು ಸಿಲುಕಿರುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.
ಭೂಕುಸಿತವು ಮೀನಾಕ್ಷಿ ಸೇತುವೆ ಸಮೀಪ ಸಂಭವಿಸಿದ್ದು, ಬೆಟ್ಟದ ದೊಡ್ಡ ಭಾಗ ಕುಸಿದು ರಸ್ತೆ ಹಾಗೂ ಸಮೀಪದ ಹೊಳೆಗೆ ಅಪಾರ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ಬಿದ್ದಿವೆ ಎಂದು ವರದಿಯಾಗಿದೆ. ಭೂಕುಸಿತದಲ್ಲಿ ಕಾರ್ಮಿಕರು, ವಾಹನ ಸವಾರರು ಅಥವಾ ಪಾದಚಾರಿಗಳು ಸಿಲುಕಿರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ರಕ್ಷಣಾ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದ್ದ ಓರ್ವ ಕಾರ್ಮಿಕನನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ, ಇನ್ನೂ ಯಾರಾದರೂ ಅವಶೇಷಗಳಡಿ ಸಿಲುಕಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ಮುಂದುವರಿಸಿದ್ದಾರೆ.




