ಬೆಳ್ತಂಗಡಿ: ಬೈಕ್ ಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿ: ಓರ್ವ ಮೃತ್ಯು-ಮತ್ತೋರ್ವ ಗಂಭೀರ
ಬೆಳ್ತಂಗಡಿ; ಗೂಡ್ಸ್ ಆಟೋರಿಕ್ಷಾವೊಂದು ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 47 ವರ್ಷದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸಹೋದರ ಗಂಭೀರ ಗಾಯಗೊಂಡ ಘಟನೆ ಜುಲೈ 5 ರ ರಾತ್ರಿ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆ ಬಳಿ ನಡೆದಿದೆ.
ಮೃತರನ್ನು ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಮಣೇಲು ಗ್ರಾಮದ ಗಾಂಧಿನಗರದ ತಿಮರಡ್ಡ ಮನೆಯ ನಿವಾಸಿ ರವೀಂದ್ರ ಮೂಲ್ಯ (47) ಎಂದು ಗುರುತಿಸಲಾಗಿದೆ. ಅವರ ಸಹೋದರ ಜಗದೀಶ್ ಮೂಲ್ಯ ಅವರ ಕಾಲಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿಗಳ ಪ್ರಕಾರ, ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸಹೋದರರು ಕೆಲಸ ಮುಗಿಸಿ ಗುರುವಾಯನಕೆರೆಯಿಂದ ವೇಣೂರಿಗೆ ಮೋಟಾರ್ ಸೈಕಲ್‌ನಲ್ಲಿ ಹಿಂತಿರುಗುತ್ತಿದ್ದಾಗ ನಿಟ್ಟಡೆಯ ಕುಂಭಶ್ರೀ ಶಾಲೆಯ ಬಳಿ ಅಪಘಾತ ಸಂಭವಿಸಿದೆ. ವೇಣೂರಿನಿಂದ ಬರುತ್ತಿದ್ದ ಗೂಡ್ಸ್ ಆಟೋರಿಕ್ಷಾ ಅವರ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಡಿಕ್ಕಿಯ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರವೀಂದ್ರ ಅವರ ತಲೆಗೆ ಗಂಬೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಜಗದೀಶ್ ಗಂಭೀರವಾಗಿ ಗಾಯಗೊಂಡರು ಆಟೋರಿಕ್ಷಾ ಚಾಲಕ, ಸ್ಥಳೀಯ ನಿವಾಸಿಗಳ ಜೊತೆಗೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು.
ನಿಟ್ಟಾಡೆ ಎಂಬಲ್ಲಿ ಹೆದ್ದಾರಿಯಲ್ಲಿನ ಸಣ್ಣ ಗುಂಡಿಯನ್ನು ತಪ್ಪಿಸುವ ಭರದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದೇ ದುರ್ಘಟನೆಗೆ ಕಾರಣ ಎನ್ನಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.




