ಮಂಗಳೂರು: ಮೊಟ್ಟ ಮೊದಲ ಬಾರಿಗೆ ನಡೆದ ಫುಡ್ ಫೆಸ್ಟ್ ಗೆ ಬಾರಿ ಮೆಚ್ಚುಗೆ
ಮಂಗಳೂರು: ಮಂಗಳೂರು ಎರಡನೇ ಹಂತದ ನಗರವಾಗಿದ್ದರೂ, ಮೈಸೂರು, ಹುಬ್ಬಳ್ಳಿಗಿಂತ ಹೆಚ್ಚು ವೇಗದಲ್ಲಿ ಮತ್ತು ರಾಜ್ಯದಲ್ಲಿ ಎರಡನೇ ಅತಿದೊಡ್ಡ ನಗರವಾಗಿ ಬೆಳೆಯುತ್ತಿದೆ. ಮಂಗಳೂರಿನಂಥ ನಗರದಲ್ಲಿ ಇದೇ ಮೊದಲ ಬಾರಿ ಫುಡ್ ಫೆಸ್ಟ್ ನಡೆದಿದ್ದು, ಭಾರೀ ಜನಮನ್ನಣೆಯನ್ನೂ ಪಡೆದಿದೆ.



ಮಣ್ಣಗುಡ್ಡದಿಂದ ಲೇಡಿಹಿಲ್- ಲಾಲ್ ಬಾಗ್ ವರೆಗೂ ರಸ್ತೆಯ ಒಂದು ಬದಿಯಲ್ಲಿ ನೂರಕ್ಕೂ ಹೆಚ್ಚು ಸ್ಟಾಲ್ ಗಳನ್ನು ಹಾಕಲಾಗಿತ್ತು. ಕೆಲವು ಸ್ಟಾಲ್ ಗಳಲ್ಲಿ ಕಾಮತ್ ಕೇಟರರ್ಸ್, ಓಷ್ಯನ್ ಪರ್ಲ್ ಥರದ ದೊಡ್ಡ ಸಂಸ್ಥೆಗಳದ್ದು ಫುಡ್ ಐಟಂಗಳಿದ್ದರೆ, ಜನಸಾಮಾನ್ಯರ ಸ್ಟಾಲ್ ಗಳೂ ಇದ್ದವು. ಹೋಮ್ ಮೇಡ್ ತಿನಿಸುಗಳನ್ನು ತಯಾರಿಸಿ ಕೊಡುವುದಕ್ಕೂ ಸ್ಟಾಲ್ ಗಳಿದ್ದವು. ಗೋಲಿ ಸೋಡಾ, ಅವಿಲ್ ಮಿಲ್ಕ್ ಮಾಡಿಕೊಡುತ್ತಿದ್ದ ಸಣ್ಣ ಸ್ಟಾಲ್ ನಲ್ಲಿ ಗ್ರಾಹಕರಿಗೆ ಕೊಡುವುದಕ್ಕೇ ಪುರುಸೊತ್ತು ಇರಲಿಲ್ಲ. ಚಿಕನ್, ಮೀನಿನ ವಿವಿಧ ರೀತಿಯ ಫುಡ್ ಐಟಂಗಳು, ವೆಜ್ ಐಟಂಗಳು ಜನರ ನೆಚ್ಚಿನ ಪಾಯಿಂಟ್ ಆಗಿದ್ದವು.


ಎಲ್ಲಿ ನೋಡಿದರೂ, ಜನವೋ ಜನ. ಮಂಗಳೂರಿನ ಜನರೆಲ್ಲ ಫುಡ್ ಸ್ಟ್ರೀಟ್ ನೋಡಲು ಬಂದಿದ್ದರೋ ಏನೋ ಅನ್ನುವಂಥ ವಾತಾವರಣ ಉಂಟಾಗಿತ್ತು. ಸಂಜೆ ಆರು ಗಂಟೆಯಿಂದ ರಾತ್ರಿ 10-11ರ ವರೆಗೂ ಜನರು ರಸ್ತೆ ಉದ್ದಕ್ಕೂ ಗಿಜಿ ಗುಟ್ಟಿದ್ದರು.
ಮಾ.22ರಿಂದ ಶುರುವಾಗಿ 26ರ ವರೆಗೂ ಪ್ರತಿ ದಿನವೂ ಭಾರೀ ಜನಸ್ತೋಮ ನೆರೆದಿತ್ತು. ಶನಿವಾರ- ಭಾನುವಾರ ಅಂತೂ ಭಾರೀ ಸಂಖ್ಯೆಯಲ್ಲಿ ಜನ ಫುಡ್ ಸ್ಟ್ರೀಟ್ ನೋಡಲು ಬಂದಿದ್ದರು. ಹಾಸ್ಟೆಲ್ ನಲ್ಲಿ ಇರುವ ಬೇರೆ ಬೇರೆ ಊರಿನ ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಫ್ಲಾಟ್ ಗಳಲ್ಲಿರುವ ಜನರೆಲ್ಲ ತಿನಿಸುಗಳನ್ನು ಸವಿಯಲು ಬಂದಿದ್ದರು. ಹೊಟೇಲ್ ನಲ್ಲಿ ಇಂಥ ಐಟಂಗಳು ಸಿಕ್ಕರೂ, ಎಲ್ಲ ರೀತಿಯವುಗಳು ಒಂದೇ ಕಡೆ ಸಿಗುವುದು ಕಡಿಮೆ. ಅದಕ್ಕೆ ಅಪವಾದ ಎನ್ನುವಂತಿತ್ತು ಫುಡ್ ಸ್ಟ್ರೀಟ್ ಹಬ್ಬ. ಜನರಿಗೆ ತಮಗೆ ಬೇಕಾದ ತಿನಿಸುಗಳನ್ನು ಬಿಸಿ ಬಿಸಿಯಾಗೇ ತಿನ್ನುವ ಅವಕಾಶಗಳಿದ್ದವು.
ಫುಡ್ ಸ್ಟ್ರೀಟ್ ಜನರು ಮತ- ಭೇದ ಇಲ್ಲದೆ ಒಂದೆಡೆ ಬೆರೆಯಲು, ವ್ಯಾಪಾರ ಕುದುರಿಸಿಕೊಳ್ಳಲು ಅವಕಾಶ ನೀಡಿತ್ತು. ಇದರಲ್ಲಿ ಎಲ್ಲ ಮತ-ಧರ್ಮೀಯರು ಸ್ಟಾಲ್ ಗಳನ್ನೂ ಹಾಕಿದ್ದರು. ಜೊತೆಗೆ, ಜನರು ಕೂಡ ಎಲ್ಲ ವಯೋಮಾನದ, ಹಾಗೆಯೇ ಎಲ್ಲ ಮತೀಯರೂ ಒಂದೆಡೆ ಕಲೆತು ತಮ್ಮ ಉದರ ತಣಿಸುತ್ತಿದ್ದರು. ಇದರ ಜೊತೆಗೆ ಕಾರ್ಯಕ್ರಮದ ವೇದಿಕೆಯಲ್ಲಿ ಸಿನಿ ಸ್ಟಾರ್ ಗಳು ಬಂದು ಫ್ರೀ ಶೋ ನೀಡುತ್ತಿದ್ದುದೂ ಜನರಿಗೆ ಉಚಿತ ಮನರಂಜನೆ ನೀಡಿತ್ತು.




