ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್: ಐವರು ವಿದ್ಯಾರ್ಥಿಗಳ ಬಂಧನ
ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ (ಖಾಸಗಿ ಕಾಲೇಜು) ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳನ್ನು ಅಪಹರಿಸಿ, ಕೊಠಡಿಯಲ್ಲಿ ಕೂಡಿಹಾಕಿ ಬೆಲ್ಟ್ ಹಾಗೂ ‘ಐರನ್ ಪಂಚ್’ ನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
ಕೇರಳದ ತ್ರಿಶೂರ್ ಮೂಲದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ ಅಮೀರ್ ಅಲಿ (19) ಹಾಗೂ ಅವರ ಸಹಪಾಠಿ ಮಹಮ್ಮದ್ ಅಲ್ಪಾಜ್ (19) ಎಂಬವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣದಲ್ಲಿ ಒಟ್ಟು 9 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿರುವ ಪೊಲೀಸರು, ಪ್ರಮುಖವಾಗಿ ಭಾಗಿಯಾಗಿದ್ದ ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ:
ರೆಹಾನ್ ಎಂ.ಪಿ (19) – ಪಯ್ಯನ್ನೂರು, ಕಣ್ಣೂರು, ಕೇರಳ
ಮೊಹಮ್ಮದ್ ಉವೈಸ್ (19) – ತೃಕ್ಕರಿಪುರ, ಕಾಸರಗೋಡು, ಕೇರಳ ಮೊಹಮ್ಮದ್ ಆದಿಲ್ ಯು.ಪಿ (19) – ವಟ್ಟಪ್ಪೋಯಿಲ್, ಕೋಯಿಕ್ಕೋಡ್, ಕೇರಳ
ರೋಹನ್ ರಮೇಶ್ (19) – ಕಣ್ಣೂರು, ಕೇರಳ
ನಾಶೀದ್ ಅಮೀರ್ (19) – ಕಣ್ಣೂರು, ಕೇರಳ
ಆಗಸ್ಟ್ 19 ರಂದು ಅಪರಾಹ್ನ ಕಾಲೇಜಿನಿಂದ ಹೊರಗೆ ನಡೆದುಕೊಂಡು ಹೋಗುತ್ತಿದ್ದ ಅಮೀರ್ ಅಲಿ ಹಾಗೂ ಮಹಮ್ಮದ್ ಅಲ್ಪಾಜ್ ಅವರನ್ನು ಆರೋಪಿಗಳು ಬಲವಂತವಾಗಿ ಬೈಕ್‌ನಲ್ಲಿ ಅಪಹರಿಸಿ, ನಿರ್ಜನ ಮನೆಯ ಕೊಠಡಿಯಲ್ಲಿ ಕೂಡಿಹಾಕಿದ್ದರು.
ಕೊಠಡಿಯಲ್ಲಿ ಜೂನಿಯರ್ ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ಕೇವಲ ಚಡ್ಡಿಯಲ್ಲಿ ನಿಲ್ಲಿಸಿ, ಬೆಲ್ಟ್, ಹ್ಯಾಂಗರ್ ಹಾಗೂ ಕಬ್ಬಿಣದ ಪಂಚ್‌ನಿಂದ ಮನಸೋಇಚ್ಛೆ ಥಳಿಸಿದ್ದರು. ದೌರ್ಜನ್ಯದ ವೀಡಿಯೊ ಚಿತ್ರೀಕರಿಸಿದ್ದಲ್ಲದೆ, ಕುಡಿಯಲು ಕಲುಷಿತ ನೀರು ಚೆಲ್ಲಿ ಯಾತನೆ ನೀಡಿದ್ದರು. ಅಲ್ಲದೆ “ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕಾಲೇಜಿನಲ್ಲಿ ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸುತ್ತೇವೆ” ಎಂದು ಜೀವಬೆದರಿಕೆ ಒಡ್ಡಿದ್ದರು.
ಘಟನೆಯಿಂದ ಆಘಾತಕ್ಕೊಳಗಾಗಿದ್ದ ವಿದ್ಯಾರ್ಥಿಗಳು ಸ್ವಊರಿಗೆ ತೆರಳಿ ಪೋಷಕರಿಗೆ ವಿಷಯ ಮುಟ್ಟಿಸಿ, ಬಳಿಕ ಮಂಗಳೂರು ದಕ್ಷಿಣ ಠಾಣೆಗೆ ಆಗಮಿಸಿ ದೂರು ನೀಡಿದ್ದರು.
ದೂರು ಆಧರಿಸಿ ಪೊಲೀಸರು ಬಿಎನ್‌ಎಸ್ (BNS) ಕಲಂ 140(3), 127(2), 115(2), 118(1), 351(2), 109, 190 ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿಕೊಂಡು ಐವರನ್ನು ಹೆಡೆಮುರಿ ಕಟ್ಟಿದ್ದಾರೆ. ಉಳಿದ ನಾಲ್ವರು ತಲೆಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ.





