September 26, 2026

ಕರಾವಳಿ ಭಾಗದ ಸಮಸ್ಯೆಗೆ ಸಚಿವ ಈಶ್ವರ ಖಂಡ್ರೆ ಸ್ಪಂದನೆ: ಪಂಚಾಯತ್ ರಾಜ್ ಸಂಘಟನೆಯ ನಿರಂತರ ಮನವಿಗೆ ಫಲ: ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಭಿನಂದನೆ

0
image_editor_output_image1908851982-1790393042708

ಮಂಗಳೂರು: ಕರಾವಳಿ ಭಾಗದ ಗ್ರಾಮೀಣ ಪ್ರದೇಶಗಳ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರಾಜ್ ಸಂಘಟನೆಯು ಹಲವು ಬಾರಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದಿದ್ದು, ಸಂಘಟನೆಯ,ನೇತೃತ್ವದಲ್ಲಿ ಈ ಕುರಿತು ನಿರಂತರವಾಗಿ ಸರ್ಕಾರದ ಗಮನ ಸೆಳೆಯಲಾಗುತ್ತಿತ್ತು. ವಿಶೇಷವಾಗಿ ಕರಾವಳಿ ಭಾಗದಲ್ಲಿ 9 ಮತ್ತು 11ನೇ ಅಂಶಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ತುಂಡು ಭೂಮಿ ಹಿಡುವಳಿದಾರರು ಎದುರಿಸುತ್ತಿರುವ ತೊಂದರೆಗಳ ಕುರಿತು ಸಂಘಟನೆಯು ಹಲವು ಸಂದರ್ಭಗಳಲ್ಲಿ ಇಲಾಖೆಯ ಗಮನಕ್ಕೆ ತಂದಿತ್ತು.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಈಶ್ವರ ಖಂಡ್ರೆ ಅವರೊಂದಿಗೆ ಪಂಚಾಯತ್ ರಾಜ್ ಸಂಘಟನೆಯ ನಿಯೋಗವು ಸುಮಾರು ಎರಡು ಗಂಟೆಗಳ ಕಾಲ ಈ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಕರಾವಳಿ ಭಾಗದ ಜನರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಿತ್ತು. ಈ ಸಂದರ್ಭದಲ್ಲಿ ನಿಯೋಗದ ಮನವಿಯನ್ನು ಆಲಿಸಿದ ಸಚಿವರು, ಸಮಸ್ಯೆ ತಮ್ಮ ಗಮನದಲ್ಲಿದ್ದು, ಶೀಘ್ರದಲ್ಲೇ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದರು.

 

ನಿಯೋಗಕ್ಕೆ ನೀಡಿದ ಭರವಸೆಯಂತೆ ಸಚಿವ ಈಶ್ವರ ಖಂಡ್ರೆ ಅವರು ಇದೀಗ ಸೆ.24ರಂದು ಮಹತ್ವದ ಆದೇಶ ಹೊರಡಿಸಿದ್ದು, ಇದರಿಂದ ಕರಾವಳಿ ಭಾಗದ ಜನರು ಬಹಳ ದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರದ ದಾರಿ ತೆರೆದಂತಾಗಿದೆ. ಸರ್ಕಾರದ ಈ ಕ್ರಮದಿಂದ ಜನಸಾಮಾನ್ಯರಿಗೆ ಉಂಟಾಗಿದ್ದ ತೊಂದರೆಗಳು ನಿವಾರಣೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಸಚಿವರು ನೀಡಿದ ಭರವಸೆಯನ್ನು ಕಾರ್ಯರೂಪಕ್ಕೆ ತಂದಿರುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಕರಾವಳಿ ಭಾಗದ ಜನತೆಯ ಪರವಾಗಿ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಪಂಚಾಯತ್ ರಾಜ್ ಸಂಘಟನೆಯೊಂದಿಗೆ ಸಭೆಗಳನ್ನು ಆಯೋಜಿಸಿ, ಸಮಸ್ಯೆಗಳನ್ನು ಸದನದಲ್ಲಿ ನಿರಂತರವಾಗಿ ಪ್ರಸ್ತಾಪಿಸಿ ಸಹಕರಿಸಿದ ಅಂದಿನ ಸ್ಪೀಕರ್ ಹಾಗೂ ಹಾಲಿ ಸಚಿವರಾದ ಶ್ರೀ ಯು.ಟಿ. ಖಾದರ್, ವಿಧಾನ ಪರಿಷತ್ ಶಾಸಕರಾದ  ಶ್ರೀ ಮಂಜುನಾಥ ಭಂಡಾರಿ ಹಾಗೂ ಶಾಸಕರಾದ ಶ್ರೀ ಅಶೋಕ್ ರೈ ಅವರಿಗೆ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಈ ಅನುಷ್ಠಾನದಲ್ಲಿ ಇನ್ನೂ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದ್ದು, ಅವುಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಸಚಿವ ಈಶ್ವರ ಖಂಡ್ರೆ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಸರ್ಕಾರದ ಗಮನಕ್ಕೆ ತರಲಾಗುವುದು. ಕರಾವಳಿ ಭಾಗದ ಜನರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಸಂಘಟನೆ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ ಎಂದು ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!