ಮಂಗಳೂರು: ಪಡಿಲ್ ಬಳಿ ಇರುವ ‘ಕಾಂಚನ ಹ್ಯುಂಡೈ’ ಶೋರೂಮ್‌ನಲ್ಲಿ ಬೆಂಕಿ ಅವಘಡ: ಕಾರುಗಳಿಗೆ ಹಾನಿ
ಮಂಗಳೂರು: ನಗರದ ಪಡಿಲ್ ಬಳಿ ಇರುವ ‘ಕಾಂಚನ ಹ್ಯುಂಡೈ’ ಶೋರೂಮ್‌ನಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಕಾರುಗಳು ಹಾನಿಗೊಳಗಾದ ಘಟನೆ ನಡೆದಿದೆ.
ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಶೋರೂಮ್‌ನಲ್ಲಿ ಏಕಾಏಕಿ ಬೆಂಕಿ ಆವರಿಸಿದೆ. ಘಟನೆಯಲ್ಲಿ ಒಂದು ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದರೆ, ಮತ್ತೂ ಮೂರು ಕಾರುಗಳ ಮುಂಭಾಗ ಭಾಗಶಃ ಸುಟ್ಟು ಹಾನಿಯಾಗಿದೆ.
ವಿಷಯ ತಿಳಿದ ತಕ್ಷಣವೇ ಪಾಂಡೇಶ್ವರದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಯಶಸ್ವಿಯಾಗಿ ಬೆಂಕಿ ನಂದಿಸಿದ್ದಾರೆ. ಇದರಿಂದಾಗಿ ಶೋರೂಮ್‌ನಲ್ಲಿದ್ದ ಇತರ ವಾಹನಗಳು ಹಾಗೂ ಆಸ್ತಿಪಾಸ್ತಿಗೆ ಹೆಚ್ಚಿನ ಹಾನಿಯಾಗುವುದು ತಪ್ಪಿದಂತಾಗಿದೆ.
ಶಾರ್ಟ್ ಸರ್ಕ್ಯೂಟ್ ಉಂಟಾಗಿರುವುದೇ ಈ ಅಗ್ನಿ ಅವಘಡಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.





