ದೆಹಲಿ ಸರ್ಕಾರದ ನೂತನ ಸಚಿವರಾಗಿ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಪ್ರಮಾಣವಚನ ಸ್ವೀಕಾರ
ದೆಹಲಿ: ದೆಹಲಿ ಸರ್ಕಾರದ ನೂತನ ಸಚಿವರಾಗಿ ಎಎಪಿ ಶಾಸಕರಾದ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಸಿಎಂ ಅರವಿಂದ ಕೇಜ್ರಿವಾಲ್ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮವೀರ್ ಸಿಂಗ್ ಬಿಧೂರ್ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅತಿಶಿ ಅವರಿಗೆ ಶಿಕ್ಷಣ, ಲೋಕೋಪಯೋಗಿ, ಇಂಧನ ಮತ್ತು ಪ್ರವಾಸೋದ್ಯಮ ಖಾತೆಗಳನ್ನು ನೀಡಲಾಗಿದ್ದು, ಭಾರದ್ವಾಜ್ ಅವರಿಗೆ ಆರೋಗ್ಯ, ನಗರಾಭಿವೃದ್ಧಿ, ನೀರು ಮತ್ತು ಕೈಗಾರಿಕೆ ಖಾತೆಗಳನ್ನು ವಹಿಸಲಾಗಿದೆ.
ದೆಹಲಿ ಅಬಕಾರಿ ನೀತಿ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ್ದ ಮನಿಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರ ಜಾಗಕ್ಕೆ ಇಬ್ಬರು ನೂತನ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಸಿಬಿಐನಿಂದ ಮನೀಶ್ ಸಿಸೋಡಿಯಾ ಮತ್ತು ಇ.ಡಿಯಿಂದ ಬಂಧನಕ್ಕೊಳಗಾಗಿರುವ ಸತ್ಯೇಂದ್ರ ಜೈನ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.




