August 13, 2026

ಬಂಟ್ವಾಳ : 5ನೇ ತರಗತಿ ಬಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ! 

0
image_editor_output_image791574560-1786611899200

ಬಂಟ್ವಾಳ: ಅಪಾಯದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬನ ಚುರುಕು ನಿರ್ಧಾರದಿಂದ ತಾಲೂಕಿನಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.

ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾನ್ವಿತ್ ತನ್ನ ಸಮಯಪ್ರಜ್ಞೆಯಿಂದ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರ ಪ್ರಾಣಾಪಾಯವನ್ನು ತಪ್ಪಿಸಿದ್ದಾನೆ. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಕೆಲಸ ನಡೆಯುತ್ತಿದ್ದ ವೇಳೆ ಸಿಬ್ಬಂದಿಯೊಬ್ಬರ ಬೆರಳು ಆಕಸ್ಮಿಕವಾಗಿ ವಿದ್ಯುತ್ ಚಾಲಿತ ತುರಿಯುವ ಯಂತ್ರಕ್ಕೆ ಸಿಲುಕಿಕೊಂಡಿದೆ. ನೋವಿನಿಂದ ಸಿಬ್ಬಂದಿ ಕಿರುಚಿಕೊಂಡಿದ್ದು, ಆ ಶಬ್ದವನ್ನು ಕೇಳಿದ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮಾನ್ವಿತ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾನೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ, ಕೂಡಲೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ಇದರಿಂದ ಸಿಬ್ಬಂದಿಗೆ ಮತ್ತಷ್ಟು ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯವಾಗಿದೆ. ಮಾನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ರವಿ ಅಂಚನ್ ಹಾಗೂ ಸದಸ್ಯರು ಶ್ಲಾಘಿಸಿದ್ದಾರೆ.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋನಯ್ಯ ನಾಯಕ್ ಹಾಗೂ ಸಿಆರ್‌ಪಿ ಜ್ಯೋತಿ ಕೂಡ ಶಾಲೆಗೆ ಭೇಟಿ ನೀಡಿ ಬಾಲಕನ ಸಮಯೋಚಿತ ಕ್ರಮವನ್ನು ಪ್ರಶಂಸಿಸಿದ್ದಾರೆ. ಅಪಾಯದ ಕ್ಷಣದಲ್ಲಿ ಗಾಬರಿಗೊಳ್ಳದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ ಪುಟ್ಟ ಮಾನ್ವಿತ್‌ನ ಸಮಯಪ್ರಜ್ಞೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *

error: Content is protected !!