ವಿಟ್ಲ: ಟೀಮ್ ನವಗ್ರಾಮ ಫೌಂಡೇಶನ್ ವತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ವಸ್ತ್ರ ವಿತರಣೆ ಕಾರ್ಯಕ್ರಮ
ವಿಟ್ಲ: ಟೀಮ್ ನವಗ್ರಾಮ ಫೌಂಡೇಶನ್ ವತಿಯಿಂದ ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ಹಾಗೂ ವಸ್ತ್ರ ವಿತರಣೆ
ವಿಟ್ಲ: “ನಿಮ್ಮ ಸೇವೆಗೆ ನಮ್ಮ ಗೌರವ” ಎಂಬ ಧ್ಯೇಯದೊಂದಿಗೆ, ಪಂಚ ಗ್ಯಾರಂಟಿ ಸಮಿತಿ ಸದಸ್ಯ ಅಬ್ಬು ನವಗ್ರಾಮ ಅವರ ನೇತೃತ್ವದಲ್ಲಿ ಟೀಮ್ ನವಗ್ರಾಮ (NGM) ಫೌಂಡೇಶನ್ ವತಿಯಿಂದ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ಹಾಗೂ ವಸ್ತ್ರ ವಿತರಣಾ ಕಾರ್ಯಕ್ರಮವು ನವಗ್ರಾಮ ಅಂಗನವಾಡಿ ಬಳಿ ಅರ್ಥಪೂರ್ಣವಾಗಿ ಜರುಗಿತು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು:
ಎಂ.ಎಸ್. ಮುಹಮ್ಮದ್ (ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ): ಸಮಾಜದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರ ಸೇವೆ ಅತ್ಯಂತ ಪವಿತ್ರವಾಗಿದ್ದು, ಅವರ ನಿಸ್ವಾರ್ಥ ದುಡಿಮೆಯನ್ನು ಗೌರವಿಸುತ್ತಿರುವ ನವಗ್ರಾಮ ತಂಡದ ಸಮಾಜಮುಖಿ ಕಾಳಜಿ ಪ್ರಶಂಸನೀಯ.
ಡಾ. ರಾಜಾರಾಂ ಕೆ.ಬಿ. (ಪ್ರಚಾರ ಸಮಿತಿ ಅಧ್ಯಕ್ಷರು): ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೊಡುಗೆ ದೊಡ್ಡದಾಗಿದ್ದು, ಅವರ ಹಿತ ಕಾಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
ಉಮಾನಾಥ ಶೆಟ್ಟಿ (ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು): ಶ್ರಮಿಕ ವರ್ಗದವರನ್ನು ಪ್ರೋತ್ಸಾಹಿಸಿ ಇಂತಹ ಮಾನವೀಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಇಡೀ ಸಮಾಜಕ್ಕೆ ಮಾದರಿ.
ಪದ್ಮನಾಭ ಪೂಜಾರಿ ಸಣ್ಣಗುತ್ತು (ವಿಟ್ಲ ಬ್ಲಾಕ್ ಅಧ್ಯಕ್ಷರು): ಪೌರ ಕಾರ್ಮಿಕರು ನೈಜ ಸ್ವಚ್ಛತಾ ರಾಯಭಾರಿಗಳು. ಸಮಾಜದ ಕಟ್ಟಕಡೆಯ ವರ್ಗವನ್ನು ಗುರುತಿಸಿ ಗೌರವಿಸುವ ಯುವಕರ ಸಮಾಜಸೇವಾ ತುಡಿತ ಮೆಚ್ಚುವಂತದ್ದು.
ಶ್ರೀಪ್ರಸಾದ್ ಪಾಣಾಜೆ (ಯುವ ಕಾಂಗ್ರೆಸ್ ಕಾರ್ಯದರ್ಶಿ): ದುಡಿಯುವ ಕೈಗಳಿಗೆ ಸದಾ ಗೌರವ ಸಿಗಬೇಕು. ಕಾರ್ಮಿಕರ ಮುಖದಲ್ಲಿ ನಗು ತಂದಿರುವ ನವಗ್ರಾಮ ತಂಡದ ಕಾರ್ಯ ಶ್ಲಾಘನೀಯ.
ಕರುಣಾಕರ ನೈತೊಟ್ಟು (ಪಟ್ಟಣ ಪಂಚಾಯಿತಿ ಅಧ್ಯಕ್ಷರು): ಪಟ್ಟಣದ ಸ್ವಚ್ಛತೆಯ ಬೆನ್ನೆಲುಬಾಗಿರುವ ಕಾರ್ಮಿಕರನ್ನು ಗೌರವಿಸಿ, ಪ್ರೋತ್ಸಾಹಿಸಿದ ಟೀಮ್ ನವಗ್ರಾಮಕ್ಕೆ ಆಡಳಿತದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ವಿ. ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ (ಪಟ್ಟಣ ಪಂಚಾಯಿತಿ ಸದಸ್ಯರು): ಪೌರ ಕಾರ್ಮಿಕರು ನಮ್ಮ ಸಮಾಜದ ಅವಿಭಾಜ್ಯ ಅಂಗ, ಅವರ ಕಾಯಕಕ್ಕೆ ಗೌರವ ನೀಡುವುದು ಎಲ್ಲರ ಕರ್ತವ್ಯ.
ರಮಾನಾಥ್ ವಿಟ್ಲ (ಗ್ರಾ.ಪಂ. ಮಾಜಿ ಅಧ್ಯಕ್ಷರು): ಊರಿನ ನೈರ್ಮಲ್ಯಕ್ಕಾಗಿ ಬೆವರು ಸುರಿಸುವ ಕಾರ್ಮಿಕರನ್ನು ಸನ್ಮಾನಿಸುವ ಸಂಸ್ಕೃತಿ ಸಮಾಜದಲ್ಲಿ ನಿರಂತರವಾಗಿ ಮುಂದುವರಿಯಲಿ.
ವೀರಪ್ಪ ಗೌಡ ರಾಯರಬೆಟ್ಟು (ಮಾಮೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷರು): ‘ಕಾಯಕವೇ ಕೈಲಾಸ’ ಎಂದು ನಿಸ್ವಾರ್ಥವಾಗಿ ದುಡಿಯುವ ಶ್ರಮಿಕರನ್ನು ಗೌರವಿಸುವುದು ಪುಣ್ಯದ ಕಾರ್ಯ.
ವೇದಿಕೆಯಲ್ಲಿ ಲತಾ ಅಶೋಕ್, ಹಸೈನಾರ್ ತಾಳಿತ್ತನೂಜಿ, ಹರೀಶ್, ವಿ.ಎ. ರಶೀದ್, ವಿಶ್ವನಾಥ ನೈತೊಟ್ಟು, ಸಂದೀಪ್ ಕುಮಾರ್, ಮೊಯಿದ್ದೀನ್ ಕುಂಞ, ಮೊಯಿದ್ದೀನ್ ಹರಿಶ ಮಾಮೇಶ್ವರ ಕಟ್ಟೆ,ಇಸಾಕ್, ಸಮದ್,, ಟೀಮ್ ನವಗ್ರಾಮ ಅಧ್ಯಕ್ಷ ಅತಾವುಲ್ಲಾ, ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ನವಗ್ರಾಮ ಸೇರಿದಂತೆ ಹಲವು ಮುಖಂಡರು ಹಾಗೂ ಊರಿನ ಸಮಸ್ತರು ಉಪಸ್ಥಿತರಿದ್ದರು.





