ಪುತ್ತೂರು: ಜನಮನ ಗೆದ್ದ ಅಶೋಕ ಜನಮನ 2026! 4 ಕೋಟಿ ರೂ. ವೆಚ್ಚದಲ್ಲಿ ವಸ್ತ್ರ, ಗೃಹೋಪಯೋಗಿ ವಸ್ತುಗಳ ಕೊಡುಗೆ ಸಹಸ್ರಾರು ಜನರಿಗೆ ಭರ್ಜರಿ ಆತಿಥ್ಯ!
ಪುತ್ತೂರು: ರೈ ಎಸ್ಟೇಟ್ & ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ‘ಅಶೋಕ ಜನಮನ 2026’ ಕಾರ್ಯಕ್ರಮದಲ್ಲಿ ಈ ಬಾರಿ ಸುಮಾರು 1 ಲಕ್ಷಕ್ಕೂ ಅಧಿಕ ಜನರಿಗೆ ಒಟ್ಟು 4 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ದೀಪಾವಳಿ ವಸ್ತ್ರಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ದೀಪಾವಳಿ ಉಡುಗೊರೆಯನ್ನು ನೀಡಲಾಯಿತು. ಈ ಬಾರಿ ಮೂರು ಬಗೆಯ ಉಡುಗೊರೆಗಳನ್ನು ಅವರ ಆಯ್ಕೆಗೆ ನೀಡಲಾಗಿದ್ದು, ತಟ್ಟೆ, ಸೀರೆ ಮತ್ತು ಬೆಡ್‌ಶೀಟ್‌ಗಳಲ್ಲಿ ಯಾವುದು ಬೇಕಾದರೂ ಒಂದು ಐಟಂ ಅನ್ನು ಪಡೆದುಕೊಂಡರು.
1 ಲಕ್ಷ ದೋಸೆ, ಮಧ್ಯಾಹ್ನ ಊಟದ ವ್ಯವಸ್ಥೆ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಹಸ್ರಾರು ಸಾರ್ವಜನಿಕರಿಗೆ ಆಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಬಿಸಿಬಿಸಿ ದೋಸೆಗಳನ್ನು ಸಿದ್ಧಪಡಿಸುವ ವಿಶೇಷ ವ್ಯವಸ್ಥೆ ಇದ್ದು, 1 ಲಕ್ಷಕ್ಕೂ ಹೆಚ್ಚು ದೋಸೆಗಳನ್ನು ವಿತರಿಸಲಾಯಿತು. ಮಧ್ಯಾಹ್ನ 12:30 ರಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.




