November 22, 2026

ಕಾಪು: ಸಮುದ್ರದ ಅಲೆಗಳಿಗೆ ಸಿಲುಕಿ ಐವರು ನೀರುಪಾಲು; ಇಬ್ಬರು ಯುವಕರು ನಾಪತ್ತೆ, ಮುಳುಗಿ ಸಾವನ್ನಪ್ಪಿರುವ ಶಂಕೆ 

0
image_editor_output_image1299916269-1795364707054

ಕಾಪು: ಕಾಪು ಬೀಚ್‌ನಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಬೃಹತ್ ಅಲೆಗಳಿಗೆ ಸಿಲುಕಿ ನೀರು ಪಾಲಾದ ಘಟನೆ ಭಾನುವಾರ ಸಂಜೆ ಸಂಭವಿಸಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಭಾನುವಾರ ಸಂಜೆ ಕಾಪು ಬೀಚ್‌ನಲ್ಲಿ ಈಜಲು ತೆರಳಿದ್ದ ವೇಳೆ ಬೃಹತ್ ಅಲೆಗಳ ಅಬ್ಬರಕ್ಕೆ ಸಿಲುಕಿ 20 ಮತ್ತು 15 ವರ್ಷದ ಇಬ್ಬರು ಯುವಕರು ಕೊಚ್ಚಿಹೋಗಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ದಾವಣಗೆರೆ ಮೂಲದ ಕುಟುಂಬವೊಂದು ವಿಹಾರಕ್ಕಾಗಿ ಕಾಪು ಬೀಚ್‌ಗೆ ಆಗಮಿಸಿತ್ತು. ಈ ತಂಡದಲ್ಲಿದ್ದ ಐವರು ಯುವಕರು ನೀರಿನಲ್ಲಿ ಆಟವಾಡಲು ಸಮುದ್ರಕ್ಕೆ ಇಳಿದಿದ್ದಾಗ, ಏಕಾಏಕಿ ಅಪ್ಪಳಿಸಿದ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ ಎಂದು ವರದಿಯಾಗಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ರಕ್ಷಣಾ ತಂಡದವರು ಐವರಲ್ಲಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಉಳಿದ ಇಬ್ಬರು ಯುವಕರು ಸಮುದ್ರ ಪಾಲಾಗಿ ನಾಪತ್ತೆಯಾಗಿದ್ದಾರೆ. ರಕ್ಷಿಸಲ್ಪಟ್ಟ ಮೂವರು ಯುವಕರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಉಚ್ಚಿಲದ ಎಸ್‌ಡಿಪಿಐ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮುದ್ರಕ್ಕಿಳಿದಿದ್ದ ಯುವಕರ ಪೈಕಿ ಒಬ್ಬರು ಉಡುಪಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಅವರನ್ನು ಭೇಟಿಯಾಗಲು ದಾವಣಗೆರೆಯಿಂದ ಕುಟುಂಬಸ್ಥರು ಬಂದಿದ್ದರು ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಇಬ್ಬರು ಯುವಕರ ಪತ್ತೆಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!