ಮಂಚಿ: ನಕಲಿ ಚಿನ್ನಾಭರಣವನ್ನು ನೈಜ ಚಿನ್ನಾಭರಣ ಎಂದು ನಂಬಿಸಿ, ವಂಚಿಸಲು ಯತ್ನ
ಬಂಟ್ವಾಳ: ಮಂಚಿ ಸಮೀಪದ ಕುಕ್ಕಾಜೆಯಲ್ಲಿ ನಕಲಿ ಚಿನ್ನಾಭರಣಗಳನ್ನು ನೈಜ ಚಿನ್ನವೆಂದು ನಂಬಿಸಿ ಚಿನ್ನದ ಕಂಪನಿಯ ಉದ್ಯೋಗಿಯೊಬ್ಬರಿಗೆ ರೂ. 3.80 ಲಕ್ಷ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಯರಗನಹಳ್ಳಿ ನಿವಾಸಿ ಸಿ. ಮಹೇಶ್ ಕುಮಾರ್ ಅವರು ನೀಡಿದ ದೂರಿನಂತೆ, ಅವರು ಚಿನ್ನದ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ 18ರಂದು ಜಿಯಾದ್ ಎಂಬ ವ್ಯಕ್ತಿ ಕಂಪನಿಯ ಜಾಹೀರಾತನ್ನು ಗಮನಿಸಿ ಸಂಪರ್ಕಿಸಿದ್ದಾನೆ. ತನ್ನ ಬಳಿ 37.2 ಗ್ರಾಂ ತೂಕದ ನೈಜ ಚಿನ್ನಾಭರಣಗಳಿದ್ದು, ಅವುಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ. ಇದಕ್ಕೆ ಪೂರಕವಾಗಿ ತನ್ನ ಮತ್ತು ಪತ್ನಿಯ ಆಧಾರ್ ಕಾರ್ಡ್ ವಿವರಗಳೊಂದಿಗೆ ಆಭರಣಗಳ ಫೋಟೋವನ್ನೂ ಕಳುಹಿಸಿದ್ದಾನೆ ಎನ್ನಲಾಗಿದೆ.
ಜಿಯಾದ್ ನೀಡಿದ ಮಾಹಿತಿಯನ್ನು ನಂಬಿದ ಮಹೇಶ್ ಕುಮಾರ್ ಅವರು ನವೆಂಬರ್ 20ರಂದು ಬೆಂಗಳೂರಿನಿಂದ ಬಿ.ಸಿ. ರಸ್ತೆಗೆ ಆಗಮಿಸಿದ್ದಾರೆ. ಬಳಿಕ ಜಿಯಾದ್ ಅವರನ್ನು ತಮ್ಮ ವಾಹನದಲ್ಲಿ ಸಹಕಾರಿ ಸಂಘವೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿದಂತೆ ರೂ.3.80 ಲಕ್ಷ ಹಣ ಪಾವತಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಬ್ಯಾಂಕ್ ಸಿಬ್ಬಂದಿ ಆಭರಣಗಳನ್ನು ಜಿಯಾದ್ಗೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.
ವ್ಯವಹಾರದ ಬಳಿಕ ಜಿಯಾದ್ನಿಂದ ಚಿನ್ನಾಭರಣಗಳನ್ನು ಪಡೆದುಕೊಳ್ಳಲು ಮಹೇಶ್ ಕುಮಾರ್ ಮುಂದಾಗಿದ್ದಾರೆ. ಈ ವೇಳೆ ಗೇಟ್ ಬಳಿ ಆಭರಣಗಳನ್ನು ನೀಡುವುದಾಗಿ ಜಿಯಾದ್ ಹೇಳಿದ್ದಾನೆ. ಆದರೆ ಆತ ನೀಡಿದ ಆಭರಣಗಳನ್ನು ಈ ಹಿಂದೆ ಕಳುಹಿಸಿದ್ದ ಫೋಟೋಗಳೊಂದಿಗೆ ಹೋಲಿಕೆ ಮಾಡಿದಾಗ ವ್ಯತ್ಯಾಸ ಕಂಡುಬಂದಿದೆ. ಇದರಿಂದ ಆಭರಣಗಳು ನಕಲಿ ಎಂಬ ಅನುಮಾನ ಮಹೇಶ್ ಕುಮಾರ್ ಅವರಿಗೆ ಬಂದಿದೆ. ತಕ್ಷಣವೇ ಆಭರಣಗಳನ್ನು ಸ್ವೀಕರಿಸಲು ನಿರಾಕರಿಸಿದ ಅವರು, ತಾನು ಪಾವತಿಸಿದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಜಿಯಾದ್ ಬೇರೆ ಬ್ಯಾಂಕಿನಲ್ಲಿ ಚಿನ್ನವನ್ನು ಅಡಮಾನವಿಟ್ಟು ಹಣ ಹಿಂದಿರುಗಿಸುವುದಾಗಿ ಹೇಳಿ ಕಾಲಹರಣ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಬಳಿಕ ಹಣ ಹಿಂದಿರುಗಿಸದೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಲ್ಲದೆ, ಮಹೇಶ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹೇಶ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಚಿನ್ನದ ಖರೀದಿ ಮತ್ತು ಮಾರಾಟದ ಹೆಸರಿನಲ್ಲಿ ನಡೆಯುವ ಇಂತಹ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ.




