ಗುಜರಾತ್: ಟ್ರಕ್ ಗೆ ಕಾರು ಡಿಕ್ಕಿ: ಹಸುಗೂಸು ಸಹಿತ ಒಂದೇ ಕುಟುಂಬದ ಏಳು ಮಂದಿ ಮೃತ್ಯು
ಗುಜರಾತ್: ಗುಜರಾತ್‌ನ ಕಛ್ ಜಿಲ್ಲೆಯ ಭುಜ್-ಖಾವ್ಡಾ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂರು ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಎದುರಿನಿಂದ ಬರುತ್ತಿದ್ದ ಸರಕು ಸಾಗಣೆ ಟ್ರಕ್‌ಗೆ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಎರಡು ತುಂಡಾಗಿದೆ. ಶನಿವಾರ (ನವೆಂಬರ್ 21) ರಾತ್ರಿ ಸುಮಾರು 9.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ಉತ್ತರಾಖಂಡದಿಂದ ಕಛ್ ಪ್ರವಾಸಕ್ಕೆ ಆಗಮಿಸಿದ್ದ ಕುಟುಂಬದ ಸದಸ್ಯರು ಕಾರಿನಲ್ಲಿ ಭುಜ್ ಕಡೆಗೆ ಪ್ರಯಾಣಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಖಾವ್ಡಾ ಕಡೆಗೆ ತೆರಳುತ್ತಿದ್ದ ಸರಕು ಸಾಗಣೆ ಟ್ರೇಲರ್ ಟ್ರಕ್ ಎದುರಿನಿಂದ ಬಂದಿದೆ. ನಿರ್ಜನ ಪ್ರದೇಶದ ಹೆದ್ದಾರಿಯಲ್ಲಿ ಎರಡೂ ವಾಹನಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಎರಡು ಭಾಗಗಳಾಗಿ ಸೀಳಿಹೋಗಿದೆ.
ಈ ಭೀಕರ ಅಪಘಾತದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಸೌರವ್‌ಸಿಂಗ್ ಜಸ್ಪಾಲ್‌ಸಿಂಗ್ ನೇಗಿ (32), ಅವರ ಪತ್ನಿ ಸವಿತಾ ಹಾಗೂ ಮೂರು ತಿಂಗಳ ಮಗಳು ಶಿವಿಕಾ ಎಂದು ಗುರುತಿಸಲಾಗಿದೆ. ಇವರೊಂದಿಗೆ ಪ್ರಯಾಣಿಸುತ್ತಿದ್ದ ರಿಂಕಿ ನಿತಿನ್ ಗುನ್ಸಾಯಿ ಮತ್ತು ಅವರ ಪುತ್ರಿ ವಾಮಿಕಾ, ರಾಜೇಶ್ ಸಿಂಗ್ ರಾವತ್ ಹಾಗೂ ಅವರ ಏಳು ವರ್ಷದ ಪುತ್ರಿ ರಕ್ಷಿತಾ ಕೂಡ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣವೇ ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ. ಮಾಹಿತಿ ತಿಳಿದ ಅಧಿಕಾರಿಗಳು ಹಲವು ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಿದ್ದಾರೆ. ಏಳು ಮಂದಿಯ ಮೃತದೇಹಗಳನ್ನು ಭುಜ್‌ನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮೃತರು ಸೇನಾ ಕುಟುಂಬಕ್ಕೆ ಸೇರಿದವರು ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಭಾರತೀಯ ಸೇನೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
ಖಾವ್ಡಾ ಪ್ರದೇಶದ ರಸ್ತೆಯಲ್ಲಿ ಈ ಹಿಂದೆಯೂ ಭೀಕರ ಅಪಘಾತ ಸಂಭವಿಸಿತ್ತು. ಅಕ್ಟೋಬರ್ 9ರಂದು ಖಾವ್ಡಾ ರಿನ್ಯೂವಬಲ್ ಎನರ್ಜಿ ಪಾರ್ಕ್ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೆ ಅದೇ ಭಾಗದಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಒಂದೇ ಕುಟುಂಬದ ಏಳು ಮಂದಿಯನ್ನು ಬಲಿಪಡೆದ ಈ ದುರಂತ ಇಡೀ ಪ್ರದೇಶದಲ್ಲಿ ಶೋಕದ ಛಾಯೆ ಮೂಡಿಸಿದೆ.




