ಪುತ್ತೂರಿನಲ್ಲಿ ಅಶೋಕ ಜನಮನ ಕಾರ್ಯಕ್ರಮ- ಹರಿದು ಬಂದ ಜನಸಾಗರ: ಒಬ್ಬ ನಿಷ್ಠಾವಂತ ವ್ಯಕ್ತಿಯಾಗಿ ಅಶೋಕ್ ಕುಮಾರ್ ರೈ ಕೆಲಸ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್
ಪುತ್ತೂರು: ರೈ ಎಸ್ಟೇಟ್ & ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ‘ಅಶೋಕ ಜನಮನ 2026’ರ ಸಭಾ ಕಾರ್ಯಕ್ರಮ ನಡೆಯಿತು.


ಗಾನಸಿರಿ ಡಾ. ಕಿರಣ್ ಕುಮಾರ್ ಅವರ ಬಳಗದ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕಲ್ಪವೃಕ್ಷದ ಹಿಂಗಾರವನ್ನು ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆಯನ್ನು ಕಾರ್ಯಕ್ರಮದ ಪ್ರಮುಖ ಅತಿಥಿಯಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಫೈರ್ ಬ್ರಾಂಡ್ ಶ್ರೀ ಬಿ.ಕೆ. ಹರಿಪ್ರಸಾದ್ ಇವರು ಮತ್ತು ಗಣ್ಯರು ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಮಾತನಾಡಿ “ಎಷ್ಟು ಜನ ಬಡವರಿಗೆ ಸಹಾಯ ಮಾಡಲು ಸಾಧ್ಯವೋ, ಅಷ್ಟು ಮಾಡುತ್ತೇವೆ. ಕುಡಿಯುವ ನೀರಿಗೆ ತೊಂದರೆ ಆಗದಂತೆ ಯೋಜನೆ ಜಾರಿಗೆ ತಂದಿದ್ದೇವೆ. ಜನರ ಋಣವನ್ನು ತೀರಿಸಲು ಯಾವುದೇ ಯೋಜನೆ ಇಲ್ಲ, ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ನಿಮ್ಮೆಲ್ಲರ ಋಣವನ್ನು ತೀರಿಸುತ್ತೇನೆ ಎಂದು ಶಾಸಕರು ಹೇಳಿದರು.


ಕಾರ್ಯಕ್ರಮದ ಪ್ರಮುಖ ಅತಿಥಿಯಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಬಿ.ಕೆ. ಹರಿಪ್ರಸಾದ್ ಮಾತನಾಡಿ, “ರಾಜಕಾರಣ ಎಂಬ ಶಬ್ದವನ್ನು ಕೆಲವು ಸಂಘಟನೆಗಳು ಈ ರಾಷ್ಟ್ರದಲ್ಲಿ ಬಹಳ ಕೆಟ್ಟದಾಗಿ ಬಿಂಬಿಸಿವೆ. ರಾಜಕಾರಣ ಅಂದರೆ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೇ ರಾಜಕಾರಣ. ಜನಸಾಮಾನ್ಯರ ಕೆಲಸ ಮಾಡುವುದಕ್ಕಾಗಿ ರಾಜಕಾರಣದಲ್ಲಿ ಇದ್ದೇವೆ, ನಮ್ಮ ಜೀವನಕ್ಕಾಗಿ ಅಲ್ಲ. ಒಬ್ಬ ನಿಷ್ಠಾವಂತ ವ್ಯಕ್ತಿಯಾಗಿ ಅಶೋಕ್ ಕುಮಾರ್ ರೈ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಸನ್ಮಾನ್ಯ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಇನ್ನಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಈಶ ವಿಠಲದಾಸ ಸ್ವಾಮೀಜಿ ಕೇಮಾರು ಮಠ, ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರ, ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಮುಸ್ಲಿಂ ಧರ್ಮಗುರು ಮೆಹರೂಫ್ ಸುಲ್ತಾನ್ ಅಲ್ ಫೂರುಖಾನಿ , ಕ್ರೈಸ್ತ ಧರ್ಮಗುರು ವಂದನೀಯ ಫಾದರ್ ಜೆ.ಬಿ. ಸಾಲ್ಡಾನಾ ಅವರು ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ 12 ಜನ ಸಾಧಕರಿಗೆ ಗೌರವ ಸನ್ಮಾನ ಮಾಡಲಾಯಿತು. ಗೂಡುದೀಪ ಸ್ಫರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.




