ಉಪ್ಪಿನಂಗಡಿ: ಕಾರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ -ಐದು ಮಂದಿ ವಿರುದ್ಧ ಪ್ರಕರಣ ದಾಖಲು: ಬಲವಂತವಾಗಿ ಬಾಲಕಿಯನ್ನು ಕರೆದೊಯ್ಯದ ವ್ಯಕ್ತಿ ವಿರುದ್ಧ ಪ್ರತಿದೂರು ದಾಖಲಿಸಿದ ಬಾಲಕಿ ತಾಯಿ
ಉಪ್ಪಿನಂಗಡಿ: ಕಾರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರನ್ನು ತಡೆದು, ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ ಆರೋಪದಡಿ ಐವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಕಾರ್ಕಳ ಈದು ನಿವಾಸಿ ಶೈಕ್ ಮುಕ್ತಾರ್ (50) ಅವರು ನೀಡಿದ ದೂರಿನ ಪ್ರಕಾರ, ಕೆಲಸದ ನಿಮಿತ್ತ ಅವರು ತಮ್ಮ ಪರಿಚಯಸ್ಥರ ಅಪ್ರಾಪ್ತ ವಯಸ್ಸಿನ ಮಗಳನ್ನು ಕಾರಿನಲ್ಲಿ ಕರೆದುಕೊಂಡು ಹಾಸನ ಕಡೆಗೆ ತೆರಳುತ್ತಿದ್ದರು. ಆಗ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡ ಕಾಪಿನಬಾಗಿಲು ತಲುಪಿದಾಗ, ಕೆಲವರು ಕಾರನ್ನು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಅಪ್ರಾಪ್ತ ಬಾಲಕಿಯ ಬಗ್ಗೆ ವಿಚಾರಿಸಿ, ಶೈಕ್ ಮುಕ್ತಾರ್ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 106/2026ರಂತೆ BNSನ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧನುಷ್ (23), ದಿನೇಶ್ (45), ಪೂರ್ಣಕ್ಷ ಬಿ. (40), ಸೂರಜ್ (25) ಹಾಗೂ ರಂಜಿತ್ ಬಂಡಾರಿ (29) ಎಂಬ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರತಿದೂರು ದಾಖಲು:
ಇದೇ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರತಿದೂರು ಕೂಡ ದಾಖಲಾಗಿದೆ. ತನ್ನ ಮಗಳನ್ನು ಶೈಕ್ ಮುಕ್ತಾರ್ (52) ಎಂಬವರು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ZERO FIR 03/2026 ಅನ್ನು BNS ಕಲಂ 137(2)ರಡಿ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




