March 20, 2026

ಪ್ರಸಕ್ತ ವರ್ಷದಿಂದ 5 ಮತ್ತು 8ನೇ ತರಗತಿಗಳಿಗೆ ‘ಪಬ್ಲಿಕ್’ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಆದೇಶ

0
IMG-20221213-WA0023.jpg

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 2022-23ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿನ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ / ಮೌಲ್ಯಾಂಕನ ನಡೆಸಲು ಅನುಮತಿ ನೀಡಿ ಆದೇಶವನ್ನು ಹೊರಡಿಸಿದೆ.

ಮಕ್ಕಳ ಕಲಿಕಾ ಕೊರತೆ ನೀಗಿಸಲು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಣಯ ಕೈಗೊಂಡಿದೆ.

ಮಕ್ಕಳ ಕಲಿಕೆಯ ಮಟ್ಟವೇನು, ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ? ಇವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಐದು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪಬ್ಲಿಕ್ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.

ಶಿಕ್ಷಣ ಹಕ್ಕು ಕಾಯಿದೆ (ಆರ್ ಟಿಐ) ಪ್ರಕಾರ ಎಂಟನೇ ತರಗತಿಯವರೆಗೆ ಮಕ್ಕಳನ್ನು ಅನುತೀರ್ಣ ಮಾಡುವಂತಿಲ್ಲ ಎಂಬ ನಿಯಮವಿದೆ. ಒಂಬತ್ತನೇ ತರಗತಿಯಲ್ಲಿ ಮಾತ್ರ ಫೇಲ್ ಮಾಡಲು ಅವಕಾಶವಿದೆ.

ಇನ್ನು ಈ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಪರೀಕ್ಷೆ ನಿರ್ವಹಿಸುವ ಬದಲಾಗಿ ಉಳಿದ ಅರ್ಧ ವರ್ಷಕ್ಕೆ ಸೀಮಿತಗೊಳಿಸಿ ಸಾಂಕೇತಿಕವಾಗಿ ನವೆಂಬರ್ -2022 ರಿಂದ ಮಾರ್ಚ್‌-2023ರ ಮೊದಲನೇ ವಾರದ ಒಳಗೆ ನಿರ್ವಹಿಸಿದ ಪಠ್ಯವಸ್ತುವನ್ನು ಆಧರಿಸಿ, ಸಂಕಲನಾತ್ಮಕ ಪರೀಕ್ಷೆ-2 ನಿರ್ವಹಿಸುವಂತೆ ಸೂಚಿಸಲಾಗಿದೆ. ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಲು ಹಾಗೂ ಪರೀಕ್ಷಾ ನಿರ್ವಹಣೆಗೆ ಅಗತ್ಯ ಪೂರ್ಣ ಸಿದ್ಧತೆ ಕೈಗೊಳ್ಳಲು ಮಾರ್ಗಸೂಚಿ ಸಿದ್ಧಪಡಿಸಿ ಆದೇಶ ಹೊರಡಿಸಲಾಗಿದೆ

ಶಾಲಾವಾರು ಮಕ್ಕಳ ಸಂಖ್ಯೆಯನ್ನಾಧರಿಸಿ 5ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ಮಕ್ಕಳು ಒಂದು ಕೇಂದ್ರದಲ್ಲಿ ಲಭ್ಯವಾಗುವಂತೆ, ಮಕ್ಕಳು ಕಡಿಮೆ ಇದ್ದಲ್ಲಿ 2 ಕಿ. ಮೀ ವ್ಯಾಪ್ತಿಯ ಅಗತ್ಯ ಮೂಲಭೂತ ಸೌಲಭ್ಯ ಹೊಂದಿರುವ ಕಿರಿಯ/ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸುವಂತೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!