ಕಾಸರಗೋಡು: KSEB ವಿದ್ಯುತ್ ಕೇಬಲ್ ಕಳವು: ಬಂಟ್ವಾಳದ ವ್ಯಕ್ತಿ ಸೇರಿ ನಾಲ್ವರ ಬಂಧನ
ಕಾಸರಗೋಡು: ಪೆರ್ಲ ಗುಣಾಜೆಯಲ್ಲಿ KSEB ಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ಕೇಬಲ್ ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳದ ಬಿ.ಸಿ. ರೋಡ್ ನಿವಾಸಿ ನೌಶಾದ್ (34), ಕಿದೂರು ನಿವಾಸಿ ಮುಹಮ್ಮದ್ (41), ಕರ್ನಾಟಕ ಮೂಲದ ಸಾಹಿದ್ (29) ಮತ್ತು ನವೀನ್ (48) ಬಂಧಿತ ಆರೋಪಿಗಳು.
ಕೃತ್ಯದಲ್ಲಿ ಭಾಗಿಯಾದ ಇನ್ನು ಇಬ್ಬರು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಜಾಲ ಬೀಸಿದ್ದಾರೆ. ಸೆಪ್ಟೆಂಬರ್ 24ರಂದು ಮುಂಜಾನೆ ಪೆರ್ಲ ಎಲೆಕ್ಟ್ರಿಕಲ್ ಸೆಕ್ಷನ್ ವ್ಯಾಪ್ತಿಯ ಗುಣಾಜೆಯ ಟ್ರಾನ್ಸ್ಫಾರ್ಮರ್ ಬಳಿಯಿಂದ ಸುಮಾರು 4 ಲಕ್ಷ ರೂ. ಮೌಲ್ಯದ 1,000 ಮೀಟರ್ ಉದ್ದದ LTAB ಕೇಬಲ್ ಗಳನ್ನು ಕಳ್ಳರು ದೋಚಿದ್ದರು.
ಮುಖವಾಡ ಧರಿಸಿ ಪಿಕಪ್ ವ್ಯಾನ್ ನಲ್ಲಿ ಬಂದಿದ್ದ ಕಳ್ಳರ ತಂಡವು ಕೇಬಲ್ ಗಳನ್ನು ಸಾಗಿಸುತ್ತಿದ್ದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಬೆಳಗ್ಗೆ ಸ್ಥಳೀಯರು ಗಮನಿಸಿ KSEB ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಬಳಿಕ ಪೆರ್ಲ ಎಲೆಕ್ಟ್ರಿಕಲ್ ಸೆಕ್ಷನ್ ಅಸಿಸ್ಟೆಂಟ್ ಎಂಜಿನಿಯರ್ ಬದಿಯಾಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಆರಂಭಿಸಿದರು. ಕಳ್ಳತನದ ಬಳಿಕ ಆರೋಪಿಗಳು ಕರ್ನಾಟಕದ ಕಡೆಗೆ ಪಲಾಯನ ಮಾಡಿರುವುದು ಪತ್ತೆಯಾಗಿತ್ತು. ಬಂಧಿತರಿಂದ ಕಳವು ಮಾಡಲಾಗಿದ್ದ ಸಂಪೂರ್ಣ ಕೇಬಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.





